ಕೆಎಎಸ್ ಪರೀಕ್ಷೆಯಲ್ಲಿ ಪಾಸ್ – ಕೂಲಿ ಮಾಡಿ ಓದಿಸಿದ್ದ ತಾಯಿಗೆ ಮಗನ ಗಿಫ್ಟ್

Public TV
2 Min Read
KPL KAS Exam Manjunatha 1

ಕೊಪ್ಪಳ : ಇಂದಿಗೂ ಇದೊಂದು ಅಪ್ಪಟ ಕೂಲಿ ಕುಟುಂಬ. ಇಂತಹದೊಂದು ಕಡು ಬಡತನದ ಕುಟುಂಬದಲ್ಲಿ ಜನಿಸಿದ ಯುವಕ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವ ಮೂಲಕ ತಾಯಿಯ ನಿಸ್ವಾರ್ಥ ಸೇವೆಗೆ ಇಂದು ಕಾಣಿಕೆ ನೀಡಿದ್ದಾರೆ.

ಕೊಪ್ಪಳ ನಗರದ ಕೂಗಳತೆಯ ದೂರದಲ್ಲಿರುವ ಹೊರತಟ್ನಾಳ ಗ್ರಾಮದ ಕೂಲಿ ಕುಟುಂಬದಲ್ಲಿ ಜನಿಸಿದ ಯುವಕ ಮಂಜುನಾಥ ಮಲ್ಲಪ್ಪ ಗುಂಡೂರು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಸೋಮವಾರ ಪ್ರಕಟವಾದ 2015ನೇ ಸಾಲಿನ (ಹೈದರಾಬಾದ್ ಕರ್ನಾಟಕದ ವಿಶೇಷ ಮೀಸಲಾತಿ) ಕೆಎಎಸ್ ಪರೀಕ್ಷೆಯಲ್ಲಿ ‘ಗ್ರೂಪ್ ಬಿ’ ಮುಖ್ಯಾಧಿಕಾರಿ ಗ್ರೇಡ್-1 ಹುದ್ದೆಗೆ 6ನೇ ರ‌್ಯಾಂಕ್ ಪಡೆದ ಮಂಜುನಾಥ್ ಕುಟುಂಬ ಮತ್ತು ಗ್ರಾಮಕ್ಕೆ ಹೆಸರು ತಂದಿದ್ದಾರೆ.

KPL KAS Exam Manjunatha 2

ಮಂಜುನಾಥ್ ಒಂದನೇ ತರಗತಿ ಓದುತ್ತಿರುವಾಗಲೇ ತನ್ನ ತಂದೆಯನ್ನು ಕಳೆದುಕೊಂಡ ನತದೃಷ್ಟ ಮಗ. ಮಂಜುನಾಥ್ ಅವರಿಗೆ ತಂದೆ ನೆನಪು ಮಾತ್ರ. ಮನೆಗೆ ಹಿರಿಯ ಮಗನಾಗಿ ಬೆಳೆದವ ಇವರಿಗೆ ಮೂರು ಜನ ತಂಗಿಯಂದಿರು. ಒರ್ವ ತಮ್ಮನ ಆರೈಕೆ ಜೊತೆ ಜೊತೆಗೆ ಶಾಲೆ ಬಿಡುವಿನ ವೇಳೆಯಲ್ಲಿ ತಾಯಿಯೊಂದಿಗೆ ಕೂಲಿ ಕೆಲಸ ಮಾಡಿ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಪ್ರೌಢ ಶಿಕ್ಷಣವನ್ನು ಕೊಪ್ಪಳ ಬಾಲಕರ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ.

KPL KAS Exam Manjunatha 4

ಪಿಯುಸಿಯನ್ನು ನಗರದ ಶ್ರೀ ಗವಿಸಿದ್ಧೇಶ್ವರ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡಿ, ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯಲ್ಲಿ (ಮೈಸೂರು) ದೂರ ಶಿಕ್ಷಣದ ಮೂಲಕ ಮನೆಯಲ್ಲಿಯೇ ಕುಳಿತು ಅಭ್ಯಾಸ ಮಾಡಿರೋದು ವಿಶೇಷ. ತಂದೆ ಇಲ್ಲದಿರುವ ಕಾರಣ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಬೆಳೆದ ಇವರು ಅನಕ್ಷರಸ್ಥ ತಾಯಿ ಸರೋಜಮ್ಮ ಅವರ ಆಶೀರ್ವಾದವನ್ನೇ ಬೆನ್ನೆಲುಬಾಗಿಸಿಕೊಂಡಿದ್ದರು. ಕಿತ್ತು ತಿನ್ನುವ ಬಡತನವನ್ನು ಹೆಗಲಿಗೆ ಹಾಕಿಕೊಂಡು ಸರ್ಕಾರಿ ನೌಕರಿ ಬೆನ್ನು ಹತ್ತಿದ ಮಂಜುನಾಥ್ ಅವರಿಗೆ ಹಣಕಾಸು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿದ್ದುಂಟು.

ದೂರ ಶಿಕ್ಷಣದ ಮೂಲಕ ಪದವಿ ಮಾಡಿಕೊಂಡು ಹಲವು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆ. ಕಠಿಣವಾದ ಅಭ್ಯಾಸದ ಮಧ್ಯೆ ಬಿಡುವಿನ ವೇಳೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಹಣ ಸಂಪಾದನೆ ಮಾಡಿ ಅಮ್ಮನಿಗೆ ಸಹಾಯ ಆಗುತ್ತಿದ್ದರು ಎಂದು ಮಂಜುನಾಥ್ ಬಾಲ್ಯ ಸ್ನೇಹಿತ ಗಣೇಶ್ ಹೇಳುತ್ತಾರೆ.

KPL KAS Exam Manjunatha 3

ಜೀವನದುದ್ದಕ್ಕೂ ಕಠಿಣ ಪರೀಕ್ಷೆ ಎದುರಿಸಿದ ಮಂಜುನಾಥ್ ಗುಂಡೂರು ಅವರಿಗೆ ಫಲವು ಅಷ್ಟೇ ವಿಚಿತ್ರವಾಗಿ ಬಂದಿವೆ. ಒಂದಾದ ಮೇಲೊಂದರಂತೆ ಎಸ್.ಡಿ.ಎ, ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕ ಹಾಗೂ ಪಿಡಿಒ ಸೇರಿದಂತೆ 10 ನೌಕರಿಗಳನ್ನು ಗಿಟ್ಟಿಸಿಕೊಂಡಿರುವುದು ಕೂಡಾ ಅವರ ಜೀವನದಲ್ಲಿನ ವಿಶೇಷತೆ. ಸದ್ಯ ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕಾರ್ಯನಿರ್ವವಹಿಸುವ ಇವರು ಆ ಭಾಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *