ಚಿತ್ರದುರ್ಗ: ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಆಂಧ್ರ ಪ್ರದೇಶದ ಯುವಕ ಅಪಹರಣ ಮಾಡಿ, ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕರ್ನಾಟಕ ಗಡಿಭಾಗದಲ್ಲಿ ಕೇಳಿಬಂದಿದೆ.
ಡಿಸೆಂಬರ್ 17 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿ ಬಯಲು ಬಹಿರ್ದೆಸೆಗೆ ತೆರಳಿದ್ದಾಗ ಆಕೆಯನ್ನು ಆಂಧ್ರದ ರಾಯದುರ್ಗ ತಾಲೂಕಿನ ಸೋಮಲಾಪುರದ ಹರೀಶ್ (21) ಎಂಬಾತ ಅಪಹರಿಸಿದ್ದಾನೆ. ನಂತರ ಬಾಲಕಿಯನ್ನು ರಾಂಪುರ ಗಡಿಭಾಗದಿಂದ ಆಂಧ್ರದ ಹಡಗಲಿ ಬಳಿ ಕರೆದುಕೊಂಡು ಹೋಗಿದ್ದು, ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಲಾಗಿದೆ.
ಬಾಲಕಿಯಿಂದ ಕುಟುಂಬಸ್ಥರಿಗೆ ಮಾಹಿತಿ ದೊರೆತ ಬಳಿಕ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹೀಗಾಗಿ ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದು, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಬಯಲು ಬಹಿರ್ದೆಸೆಗೆ ತೆರಳುವ ಮಹಿಳೆಯರು, ಮಕ್ಕಳು ಸಾಕಷ್ಟು ಸಮಸ್ಯೆಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿಸಲು ಕರ್ನಾಟಕ ಸರ್ಕಾರ ಹಲವಾರು ಯೋಜನೆಗಳನ್ನು ತರುತ್ತಿದೆ. ಆದರೂ ಆಂಧ್ರಪ್ರದೇಶ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಬಯಲು ಬಹಿರ್ದೆಸೆಗೆ ಮುಕ್ತಿ ಸಿಕ್ಕಿಲ್ಲ. ಅಲ್ಲದೇ ಮಹಿಳೆಯರು, ಮಕ್ಕಳ ಅಪಹರಣ, ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ನಿರಂತರವಾಗಿವೆ ಎಂಬ ಆತಂಕವಿದೆ.