ಮಂಗಳೂರು: ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಮಂಗಳೂರಿನಲ್ಲಿ ಕೇಸ್ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಕುಮಾರ್ ಶೆಟ್ಟಿ ಅವರು ಖಾದರ್ ವಿರುದ್ಧ ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರನ್ನು ಸ್ವೀಕರಿಸಿರುವ ಪೊಲೀಸರು ಖಾದರ್ ವಿರುದ್ಧ ಎಫ್ ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಕೇಸ್ ಹಾಕಿದ್ದು ಯಾಕೆ?
ಕಳೆದ ಭಾನುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರಚೋದನಕಾರಿ ಭಾಷಣ ಮಾಡಿದ್ದ ಖಾದರ್, ಪೌರತ್ವ ಕಾಯ್ದೆ ಜಾರಿಯಾದಲ್ಲಿ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಹೇಳಿದ್ದರು.
ಮಸೂದೆ ವಿಚಾರದಲ್ಲಿ ಇಡೀ ದೇಶ ಹೊತ್ತಿ ಉರಿಯುತ್ತಿದ್ದರೂ, ಕರ್ನಾಟಕ ಮಾತ್ರ ಶಾಂತಿಯಿಂದಿದೆ. ಆದರೆ ರಾಜ್ಯದಲ್ಲಿ ಈ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದಲ್ಲಿ ಇಡೀ ರಾಜ್ಯವೇ ಹೊತ್ತಿ ಉರಿಯಬಹುದು. ಇದು ಮುಖ್ಯಮಂತ್ರಿಗೆ ನೀಡುತ್ತಿರುವ ಎಚ್ಚರಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಖಾದರ್ ಅವರ ಈ ಮಾತು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯಕ್ಕೆ ಬೆಂಕಿ ಹಚ್ಚಲು ಜನರನ್ನು ಪ್ರಚೋದಿಸುತ್ತಿದ್ದಾರೆ ಎಂಬ ನೆಲೆಯಲ್ಲಿ ಟೀಕೆಗಳು ಕೇಳಿಬರುತ್ತಿತ್ತು.
ತಮ್ಮ ಹೇಳಿಕೆ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸ್ಪಷ್ಟಪಡಿಸಿದ್ದ ಖಾದರ್, ನಾನು ಯಾವುದೇ ಪ್ರಚೋದನಕಾರಿ ಹೇಳಿಕೆಯನ್ನು ನೀಡಿಲ್ಲ. ಪೌರತ್ವದ ವಿಚಾರದಲ್ಲಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿಯೂ ನಡೆಯಬಹುದು ಈ ಕುರಿತು ಮುಖ್ಯಮಂತ್ರಿಗಳು ಎಚ್ಚರದಿಂದಿರಬೇಕು ಎಂದು ಹೇಳಿದ್ದೇನೆ. ಅಲ್ಲದೆ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬಾರದು ಎಂದು ಎಚ್ಚರಿಸಿದ್ದಾಗಿ ಹೇಳಿದ್ದರು.