ಕಟಕ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯವು ಇಂದು ಕಟಕ್‍ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಈಗಾಗಲೇ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿರೋ ತಂಡಗಳು ಮೂರು ಪಂದ್ಯಗಳ ಸರಣಿಯನ್ನ ತಮ್ಮ ವಶಕ್ಕೆ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ವಿಶಾಖಪಟ್ಟಣಂನಲ್ಲಿ ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ವೆಸ್ಟ್ ಇಂಡೀಸ್ ಸೋತು ಸುಣ್ಣವಾಗಿತ್ತು. ಅದರಿಂದಾಗಿಯೇ ಭಾನುವಾರ ನಡೆಯಲಿರುವ ಸರಣಿಯ ಕೊನೆಯ ಪಂದ್ಯವು ಕುತೂಹಲ ಕೆರಳಿಸಿದೆ. ಸದ್ಯ 1-1ರ ಸಮಬಲವಾಗಿರುವ ಸರಣಿಯನ್ನು ಜಯಿಸಲು ಉಭಯ ತಂಡಗಳೂ ಸಿದ್ಧವಾಗಿವೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಈ ಏಕದಿನ ಸರಣಿ ಗೆದ್ದರೆ ವಿಂಡೀಸ್ ವಿರುದ್ಧ ಸತತ ಹತ್ತನೇ ಏಕದಿನ ಸರಣಿ ಗೆದ್ದ ದಾಖಲೆ ಬರೆಯಲಿದೆ. ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡ ಭಾರತದ ವಿರುದ್ಧ 8 ವಿಕೆಟ್ ಗಳ ಜಯಗಳಿಸಿದರೆ, ಎರಡನೇ ಪಂದ್ಯದಲ್ಲಿ ಭಾರತದ ಬೃಹತ್ ಮೊತ್ತವನ್ನ ಚೇಸ್ ಮಾಡುವಲ್ಲಿ ವಿಂಡೀಸ್ ವಿಫಲವಾಗಿತ್ತು.
ಎರಡನೇ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ ಮನ್ ಗಳು ಅಬ್ಬರಿಸಿದ್ರು. ಅದರಲ್ಲೂ ಹಿಟ್ ಮ್ಯಾನ್ ರೋಹಿತ್, ಕನ್ನಡಿಗ ರಾಹುಲ್ ಶತಕ ಬಾರಿಸಿ ಭಾರತ 387 ರನ್ ಗಳನ್ನ ಕಲೆಹಾಕಿತ್ತು. ಬೌಲಿಂಗ್ ನಲ್ಲಿ ಶಮಿ ವಿಂಡೀಸ್ ಬ್ಯಾಟ್ಸ್ ಮನ್ ಗಳಿಗೆ ಕಾಟ ಕೊಡುತ್ತಿದ್ದರೆ ಕುಲ್ ದೀಪ್ ಹ್ಯಾಟ್ರಿಕ್ ವಿಕೆಟ್ ಪಡೆದು ವಿಂಡೀಸ್ ಬ್ಯಾಟ್ಸ್ ಮನ್‍ಗಳನ್ನ ಕಟ್ಟಿಹಾಕಿದ್ರು. ಇಂದಿನ ಪಂದ್ಯದಲ್ಲಿ ಭಾರತ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟ ಆಡಬೇಕು. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಭಾರತ ಬಲಿಷ್ಠವಾಗಿದ್ದು ಕೈಚೆಲ್ಲುತ್ತಿರೋ ಕ್ಯಾಚ್ ಗಳು ದುಬಾರಿಯಾಗುತ್ತಿರೋದು ಮೊದಲ ಎರಡು ಪಂದ್ಯದಲ್ಲಿ ನೋಡಿದ್ದೇವೆ.
ಇಂದಿನ ಪಿಚ್ ಸಹ ಬ್ಯಾಟಿಂಗ್ ಗೆ ಪೂರಕವಾಗಿದ್ದು, ಹೊಡಿಬಡಿ ದಂಡಿಗರ ಎರಡು ತಂಡದಲ್ಲಿರೋದ್ರಿಂದ ಇಂದಿನ ಮ್ಯಾಚ್ ನಲ್ಲಿ ಉತ್ತಮ ಸ್ಕೋರ್ ಬರುವ ನಿರೀಕ್ಷೆ ಇದೆ. ಎರಡನೇ ಪಂದ್ಯದ ಜಯದ ಆತ್ಮವಿಶ್ವಾಸದಲ್ಲಿರೋ ಭಾರತದ ಕ್ರಿಕೆಟ್ ಕಲಿಗಳು ಇಂದಿನ ಪಂದ್ಯದಲ್ಲಿ ವಿಂಡೀಸ್ ಅನ್ನು ಮಣಿಸಿ 2-1 ಸರಣಿಯನ್ನ ತನ್ನದಾಗಿಸಿಕೊಳ್ಳಲು ಆವಣಿಸುತ್ತಿದೆ.
ಇತ್ತ ವಿಂಡೀಸ್ ಸಹ ಪೆಟ್ಟು ಬಿದ್ದ ಹುಲಿಯಾಂತಾಗಿದ್ದು, ಎರಡನೇ ಪಂದ್ಯದ ಸೋಲಿನ ಸೇಡನ್ನ ತೀರಿಸಿಕೊಂಡು ಸರಣಿಯನ್ನ ಗೆಲ್ಲೋದಕ್ಕೆ ಕಾಯುತ್ತಿದೆ.