ಬೆಂಗಳೂರು: ಇತ್ತೀಚೆಗಷ್ಟೆ ಈರುಳ್ಳಿ ಬೆಲೆ ಹಾಗೂ ನುಗ್ಗೆಕಾಯಿ ಬೆಲೆ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಈಗ ಅವರೆಕಾಯಿ ಬೆಲೆ ಜಾಸ್ತಿಯಾಗಿದೆ. ಇದರಿಂದ ಅವರೆಕಾಯಿ ಪ್ರಿಯರಿಗೆ ಶಾಕ್ ಆಗಿದೆ.
ಕಳೆದ ವರ್ಷ ಕೇವಲ 20 ರಿಂದ 40 ರೂ. ಸಿಗುತ್ತಿದ್ದ ಅವರೆಕಾಯಿ, ಈ ಬಾರಿ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಒಂದು ಕೆಜಿ ಸಾಧಾರಣ ಅವರೆಕಾಯಿ ಬೆಲೆ 40 ರಿಂದ 50 ರೂಪಾಯಿ ಮಾರಟವಾಗುತ್ತಿದ್ದು, ಬೆಸ್ಟ್ ಕ್ವಾಲಿಟಿ ಅವರೆಕಾಯಿ ಬೇಕು ಎಂದರೆ 70 ರಿಂದ 80 ರೂ. ಮಾರಾಟವಾಗುತ್ತಿದೆ.
ರಾಗಿ, ಮೆಕ್ಕೆಜೋಳ, ಜೋಳ, ತೊಗರಿ ಹೊಲಗಳಲ್ಲಿ ಉಪ ಬೆಳೆಯಾಗಿ ಅವರೆಕಾಯಿಯನ್ನು ಬೆಳೆಸಲಾಗುತ್ತಿತ್ತು. ಆದರೆ ಈ ಬಾರಿ ಸುರಿದ ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾದ ಪರಿಣಾಮ ರೋಗ ಬಂದು ಅವರೆಕಾಯಿ ಇಳುವರಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಕೇವಲ 2 ರಿಂದ 3 ಲೋಡ್ ಅವರೆಕಾಯಿ ಮಾತ್ರ ಪೂರೈಕೆಗೆ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಡೆಂಕಣಕೋಟೆ, ಥಳಿ, ಆನೇಕಲ್, ಚಿತ್ರದುರ್ಗ, ಮಾಗಡಿಗಳಿಂದ ಸೊಗಡು ಅವರೆಕಾಯಿ ಮಾರುಕಟ್ಟೆಗೆ ಪ್ರವೇಶಿಸಬೇಕಿತ್ತು. ಇನ್ನೂ ಜನವರಿ ಮೊದಲ ವಾರ ಬರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಸದ್ಯ ಈರುಳ್ಳಿ, ನುಗ್ಗೆಕಾಯಿ ಬೆಲೆ ಕೇಳಿ ಸುಸ್ತಾದ ಜನ, ಈಗ ಅವರೆಕಾಯಿ ಬೆಲೆ ಕೂಡ ಶಾಕ್ ನೀಡಿದ್ದು, ಮುಂದಿನ ದಿನದಲ್ಲಿ ಇನ್ಯಾವೆಲ್ಲ ತರಕಾರಿ ರೇಟ್ ಜಾಸ್ತಿ ಆಗಬಹುದು ಎಂದು ಚಿಂತೆಯಲ್ಲಿದ್ದಾರೆ.