ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ ಜಂಟಲ್ ಮನ್ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಗುರು ದೇಶಪಾಂಡೆ ಜಿ ಸಿನಿಮಾಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಇದೀಗ ಬಿಡುಗಡೆಯಾಗಿದೆ. ವಿಶೇಷವೆಂದರೆ ಈ ಹಾಡಿನ ಮೂಲಕವೇ ನಾಯಕ ಪ್ರಜ್ವಲ್ ದೇವರಾಜ್ ಅವರ ಒಂದಷ್ಟು ಗೆಟಪ್ಪುಗಳನ್ನೂ ಅನಾವರಣಗೊಳಿಸಿದೆ. ಪ್ರತಿಯೊಬ್ಬರಿಗೂ ಆಪ್ತವಾಗುವಂಥಾ ಆವೇಗದ ಸಾಲುಗಳನ್ನೊಳಗೊಂಡ ಈ ಹಾಡು ನಟ ವಸಿಷ್ಠ ಸಿಂಹ ಅವರ ಕಂಠಸಿರಿಯಲ್ಲಿ ರಗಡ್ ಶೈಲಿಯಲ್ಲಿ ಮೂಡಿ ಬಂದಿದೆ.
‘ನಡುಗುತಿದೆ ಎದೆಗೂಡು ಸುಡುಗಾಡು ಬರಿ ಮೌನ. ತೆವಳುತಿದೆ ವಾತ್ಸಲ್ಯ ಬರಿ ಮೋಸ ದ್ವೇಷ ಇದೇ ಜಮಾನ’ ಅಂತ ಶುರವುವಾಗೋ ಈ ಹಾಡನ್ನು ಧನಂಜಯ್ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಅದಕ್ಕೆ ವಿಶಿಷ್ಟ ಅನ್ನಿಸುವಂಥಾ ಶೈಲಿಯಲ್ಲಿಯೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರತಿ ಸಾಲುಗಳಲ್ಲಿಯೂ ಬಹುತೇಕರಿಗೆ ಆಪ್ತವಾಗುವಂಥಾ ಸಾಲುಗಳೊಂದಿಗೆ, ವಸಿಷ್ಠ ಸಿಂಹ ಅವರ ಬೇಸ್ ವಾಯ್ಸ್ ನೊಂದಿಗೆ ಮೂಡಿ ಬಂದಿರೋ ಈ ಹಾಡಿನಲ್ಲಿಯೇ ಕಥೆಯ ಝಲಕ್ಕುಗಳಿವೆ. ಅದು ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಚಿತ್ರವೆಂಬುದನ್ನೂ ಋಜುವಾತುಗೊಳಿಸುವಂತಿವೆ.
ಈ ಲಿರಿಕಲ್ ವಿಡಿಯೋ ಸಾಂಗ್‍ನಲ್ಲಿಯೇ ಅದು ಮೂಡಿ ಬಂದಿರೋ ರೀತಿ ಮತ್ತು ಮೇಕಿಂಗ್ ಮಜಲುಗಳನ್ನೂ ತೆರೆದಿಡಲಾಗಿದೆ. ವಿಜಯಲಕ್ಷ್ಮಿ ಮುರುಗೇಶ್ ನಾಯ್ಡು ಅವರ ಆಶೀರ್ವಾದದೊಂದಿಗೆ, ಬಿ.ಟಿ ಮಂಜುನಾಥ್ ಅರ್ಪಿಸುವ ಈ ಚಿತ್ರವನ್ನು ಗುರು ದೇಶಪಾಂಡೆ ಜಿ ಸಿನಿಮಾಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಾಮಾನ್ಯವಾಗಿ ಗುರು ದೇಶಪಾಂಡೆ ನಿರ್ದೇಶನದ ಯಾವುದೇ ಸಿನಿಮಾಗಳನ್ನು ನೋಡಿದರೂ ಅದರಲ್ಲಿ ಹಾಡುಗಳಿಗೆ ಕಥೆಯಷ್ಟೇ ಮಹತ್ವ ಕೊಟ್ಟು ರೂಪಿಸಿದ್ದಾರೆ. ಅವರು ನಿರ್ಮಾಣ ಮಾಡಿರುವ ಜಂಟಲ್ ಮನ್ ಕೂಡಾ ಅದಕ್ಕೆ ತಕ್ಕುದಾಗಿಯೇ ರೂಪುಗೊಳ್ಳುತ್ತಿದೆ.
ಅಜನೀಶ್ ಲೋಕನಾಥ್ ಗುರು ದೇಶಪಾಂಡೆಯವರ ಇಂಗಿತದಂತೆಯೇ ಈ ಸಿನಿಮಾದ ಎಲ್ಲ ಹಾಡುಗಳಿಗೂ ಭಿನ್ನವಾದ ಸಂಗೀತದ ಪಟ್ಟುಗಳನ್ನು ಹಾಕಿದ್ದಾರಂತೆ. ಅಂದಹಾಗೆ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಈ ವರೆಗೆ ನಟಿಸಿರದಂಥ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದು ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯ ಬೇಸಿನ ಗುಣಲಕ್ಷಣಗಳನ್ನು ಹೊಂದಿರುವ ಪಾತ್ರ. ಇದರ ಸುತ್ತಾ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಜಂಟಲ್ ಮನ್‍ನನ್ನು ರೂಪಿಸಲಾಗಿದೆ. ಇದರಲ್ಲಿ ಕ್ರೈಂ ಅಂಶಗಳೂ ಸೇರಿಕೊಂಡಿವೆಯಾ ಎಂಬ ಕುತೂಹಲ ಮೂಡಿಸುವಲ್ಲಿಯೂ ಇದೀಗ ಬಿಡುಗಡೆಯಾಗಿರುವ ಲಿರಿಕಲ್ ವಿಡಿಯೋ ಯಶ ಕಂಡಿದೆ. ಈ ಚಿತ್ರ ಮುಂದಿನ ವರ್ಷದ ಆರಂಭದ ತಿಂಗಳುಗಳಲ್ಲಿಯೇ ಬಿಡುಗಡೆಯಾಗಲಿದೆ.