ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲು ಡಿಜಿಪಿ ಆದೇಶ ಹೊರಡಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ನಡೆದ ಹಿಂಸಾತ್ಮಕ ಪ್ರತಿಭಟನೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹೀಗಾಗಿ ಇಂಟರ್‌ನೆಟ್ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೆ ಕೋಮು ಪ್ರಚೋದಕ ವಿಚಾರಗಳ ಸಂದೇಶ ರವಾನೆಯಾದರೆ ಕಡಿವಾಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಗೋಲಿಬಾರ್, ಇಬ್ಬರು ಬಲಿ- ಗುಂಡು ಹಾರಿಸಿದ್ದಕ್ಕೆ ಪೊಲೀಸ್ ಆಯುಕ್ತರಿಂದ ಸ್ಪಷ್ಟನೆ
ಮಂಗಳೂರಿನಲ್ಲಿ ಕರ್ಪ್ಯೂ ಅವಧಿ ವಿಸ್ತರಣೆ ಮಾಡಲಾಗಿದ್ದು, ಡಿಸೆಂಬರ್ 22ರ ಮಧ್ಯರಾತ್ರಿವರೆಗೆ ಜಾರಿಯಲ್ಲಿ ಇರಲಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್ ಹರ್ಷ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಎಲ್ಲಾ ಅಂಗನವಾಡಿ, ಶಾಲಾ, ಕಾಲೇಜು, ಐಟಿಐ, ಪಾಲಿಟೆಕ್ನಿಕ್, ವೃತ್ತಿಪರ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಎಲ್ಲಾ ಮದ್ಯದಂಗಡಿ, ವೈನ್ ಶಾಪ್, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ತೆರೆಯುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.
ಕರ್ಪ್ಯೂ ಪ್ರಕರಣ:
ಗುಪ್ತದಳದ ಮುಖ್ಯಸ್ಥ ಡಿಐಜಿ ದಯಾನಂದ್ ಅವರಿಗೆ ಹೆಚ್ಚುವರಿ ಉಸ್ತುವಾರಿ ನೀಡಲಾಗಿದ್ದು, ತುರ್ತಾಗಿ ಮಂಗಳೂರಿಗೆ ತೆರಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಈ ಮೂಲಕ ದಯಾನಂದ್ ಅವರು ಪರಿಸ್ಥಿತಿ ನಿಯಂತ್ರಣಕ್ಕೆ ತುರ್ತು ಮಂಗಳೂರಿಗೆ ತೆರಳುತ್ತಿದ್ದಾರೆ.