– ಸೆಲ್ಯೂಟ್ ಮಾಡಿ, ನಮಸ್ಕರಿಸಿ ಬಿಕ್ಕಿಬಿಕ್ಕಿ ಅತ್ತ ತಾಯಿ
ಚಂಡೀಗಢ: ಹುತಾತ್ಮನಾದ ಮಗನ ಮುಖ ನೋಡದೆಯೇ ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಿದ ಮನಕಲಕುವ ಘಟನೆ ಪಂಜಾಬ್‍ನ ಚಂಡೀಗಢ್‍ನಲ್ಲಿ ನಡೆದಿದೆ.
ಜಮ್ಮು- ಕಾಶ್ಮೀರದ ರಾಜೌರಿ ಸೆಕ್ಟರಿನ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಹುತಾತ್ಮರಾದ ಸುಖ್ವಿಂದರ್ ಸಿಂಗ್ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಸುಖ್ವಿಂದರ್ ಅವರ ಪಾರ್ಥಿವ ಶರೀರವನ್ನು ಬುಧವಾರ ಫತೇಪುರವನ್ನು ಗ್ರಾಮದಲ್ಲಿ ತರಲಾಯಿತು. ಈ ವೇಳೆ ಅಲ್ಲಿದ್ದ ಜನರು ಭಾರತ್ ಮಾತಾ ಕೀ ಜೈ ಹಾಗೂ ಸುಖ್ವಿಂದರ್ ಸಿಂಗ್ ಅಮರವಾಗಿರಲಿ ಎಂದು ಘೋಷಣೆ ಕೂಗುತ್ತಿದ್ದರು.
ಹುತಾತ್ಮರಾದ ಸುಖ್ವಿಂದರ್ ಅವರ ಮುಖವನ್ನು ಯಾರಿಗೂ ತೋರಿಸಲಿಲ್ಲ. ಸುಖ್ವಿಂದರ್ ಅವರ ತಾಯಿ ರಾಣಿ ದೇವಿ ಹಾಗೂ ಅವರ ಸಹೋದರ ಗುರುಪಾಲ್ ಸಿಂಗ್ ಮುಖ ತೋರಿಸಲು ಹೇಳುತ್ತಾರೆ. ಆದರೆ ಅಧಿಕಾರಿಗಳು ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಸುಖ್ವಿಂದರ್ ಸಿಂಗ್ ಅವರ ಮುಖಕ್ಕೆ ಸಾಕಷ್ಟು ಗಾಯಗಳಾಗಿದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸುಖ್ವಿಂದರ್ ಅವರ ತಾಯಿ ಜೋರಾಗಿ ಕಿರುಚಿ ಮಗನಿಗೆ ಸೆಲ್ಯೂಟ್ ಮಾಡಿದ್ದಾರೆ.
ಸುಖ್ವಿಂದರ್ ಹುತಾತ್ಮರಾದ ಸುದ್ದಿ ಅವರ ತಾಯಿಗೆ ಬುಧವಾರ ಬೆಳಗ್ಗೆ ತಿಳಿಸಲಾಯಿತು. ಮಧ್ಯಾಹ್ನ ಸುಮಾರು 3 ಗಂಟೆಗೆ ಗ್ರಾಮದ ಸ್ಮಶಾನದಲ್ಲಿ ಸೇನೆಯ ಗೌರವಗಳೊಂದಿಗೆ ಸುಖ್ವಿಂದರ್ ಅವರ ಅಂತ್ಯ ಸಂಸ್ಕಾರವನ್ನು ಮಾಡಲಾಯಿತು. ಈ ವೇಳೆ ಸೈನ್ಯದ ತುಕಡಿ ಹುತಾತ್ಮರ ಗೌರವವನ್ನು ನೀಡಿತು. ಯುವಕರು ಕೈಯಲ್ಲಿ ರಾಷ್ಟ್ರಧ್ವಜ ಹಾಗೂ ಸುಖ್ವಿಂದರ್ ಸಿಂಗ್ ಅವರ ಫೋಟೋ, ಪೋಸ್ಟರ್ ಹಿಡಿದು ಅಂತಿಮ ವಿದಾಯ ತಿಳಿಸಿದರು. ಸುಖ್ವಿಂದರ್ ಅವರ ಚಿತೆಗೆ ಅವರ ಹಿರಿಯ ಸಹೋದರ ಅಗ್ನಿಸ್ಪರ್ಶ ನೀಡಿದರು.
21 ವರ್ಷದ ರೈಫಲ್‍ಮ್ಯಾನ್ ಆಗಿರುವ ಸುಖ್ವಿಂದರ್ ಅವರ ತಂದೆ ಅವಿನಾಶ್ ಸಿಂಗ್ ಪಂಜಾಬ್ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೂಡ 2007ರಲ್ಲಿ ನಿಧನರಾಗಿದ್ದರು. ಸಿಖ್ವಿಂದರ್ 2017ರಲ್ಲಿ ಸೇನೆಗೆ ಸೇರಿದ್ದರು. ತಮ್ಮ ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಲು ಸಿಖ್ವಿಂದರ್ ನವೆಂಬರ್ 22ರಿಂದ 15 ದಿನ ರಜೆ ತೆಗೆದುಕೊಂಡು ಡ್ಯೂಟಿಗೆ ಹಿಂದಿರುಗಿದ್ದರು.