ಮಡಿಕೇರಿ: ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ, ಅಕ್ರಮವಾಗಿ ಬಂದಿರುವ ವಲಸಿಗರನ್ನು ತಡೆಯಲು ಮತ್ತು ಅವರನ್ನು ಹೊರದಬ್ಬಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಮುಸಲ್ಮಾನರನ್ನು ಹೊರಗೆ ಕಳುಹಿಸಲು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ವೀಸಾ, ಪಾಸ್‍ಪೋರ್ಟ್ ಏನೂ ಇಲ್ಲದೆ ಬಂದಿರುವವರಿದ್ದಾರೆ. ವೀಸಾ, ಪಾಸ್‍ಪೋರ್ಟ್ ಅವಧಿ ಮುಗಿದರೂ ಇಲ್ಲಿಯೇ ನೆಲಸಿರುವವರು ಇದ್ದಾರೆ. ಹೀಗಾಗಿ ಅವರೆಲ್ಲರನ್ನೂ ಇಲ್ಲಿಂದ ಹೊರದಬ್ಬಲು ಈ ಕಾಯ್ದೆ ತರಲಾಗಿದೆ. ಇದರಿಂದ ಇಲ್ಲಿಯೇ ಹುಟ್ಟಿ ಬೆಳೆದಿರುವ ಮುಸ್ಲಿಂರಿಗಾಗಲಿ ಅಥವಾ ವೀಸಾ, ಪಾಸ್‍ಪೋರ್ಟ್ ವ್ಯಾಲಿಡಿಟಿ ಇರುವವರಿಗಾಗಲಿ ಯಾವುದೇ ತೊಂದರೆ ಇಲ್ಲ ಎಂದರು.
ಸ್ಥಳೀಯ ಮುಖಂಡರು ಹೊರಗಿನಿಂದ ಅದರಲ್ಲೂ ಕೇರಳದಿಂದ ಮುಸ್ಲಿಂ ಮುಖಂಡರನ್ನು ಕರೆಯಿಸಿ ಪ್ರಚೋದನಕಾರಿ ಭಾಷಣ ಮಾಡುವುದು ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಹತ್ತಿಕಲು ರಾಜ್ಯ ಸರ್ಕಾರ ಎದರಿಕೊಂಡು 144 ಸೆಕ್ಷನ್ ಜಾರಿ ಮಾಡುವ ಮೂಲಕ ತನ್ನ ಪುಕ್ಕಲುತನ ಪ್ರದರ್ಶಿಸಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಬೋಪಯ್ಯ ತಿರುಗೇಟು ನೀಡಿದ್ದಾರೆ. ಕಾಯ್ದೆಯಿಂದ ಯಾರಿಗೆ ಏನು ತೊಂದರೆಯಾಗಿದೆ ಎನ್ನುವುದನ್ನು ಸಿದ್ದರಾಮಯ್ಯ ಹೇಳಲಿ. ರಾಜಕೀಯ ದುರುದ್ದೇಶದಿಂದ ಕಾಯ್ದೆಯನ್ನು ವಿರೋಧಿಸುವುದನ್ನು ಸಿದ್ದರಾಮಯ್ಯನವರು ಬಿಡಲಿ ಎಂದರು.
ಇದೇ ವೇಳೆ ಅಸ್ಸಾಂ ಬಾಂಗ್ಲಾ ವಲಸಿಗರ ಹೆಸರಿನಲ್ಲಿ ಕೊಡಗಿನಲ್ಲೂ ಒಂದು ಲಕ್ಷ ಅಕ್ರಮ ವಲಸಿಗರು ನೆಲಸಿದ್ದಾರೆ ಎಂದು ಬೋಪಯ್ಯ ಗಂಭೀರವಾಗಿ ಆರೋಪಿಸಿದರು.