ನವದೆಹಲಿ: ಭಾರತದ ಆಧುನಿಕ ಚಾಣಕ್ಯ, ರಾಜಕೀಯ ತಂತ್ರಗಾರ ಎಂದು ಹೆಸರನ್ನು ಪಡೆದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಹಾರಾಷ್ಟ್ರ ಚುನಾವಣೆಯ ನಂತರ ನನ್ನನ್ನು ಚಾಣಕ್ಯನಿಗೆ ಹೋಲಿಸುವುದು ನಿಂತಿದ್ದು ಬಹಳ ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಷಯದ ಕುರಿತು ಕೇಳಲಾದ ಪ್ರಶ್ನೆಗೆ, ಮಹಾರಾಷ್ಟ್ರದಲ್ಲಿ ನಾವು ಸೋತಿಲ್ಲ. ನಾವು ಏಕಾಂಗಿಯಾಗಿ 105 ಸ್ಥಾನವನ್ನು ಗೆದ್ದುಕೊಂಡಿದ್ದು ಮೈತ್ರಿಗೆ ಜನ ಸಂಪೂರ್ಣ ಬೆಂಬಲ ನೀಡಿದ್ದಾರೆ. ಬಹುಮತಕ್ಕಿಂತಲೂ 20ಕ್ಕೂ ಹೆಚ್ಚು ಸ್ಥಾನವನ್ನು ಗೆದ್ದುಕೊಂಡಿದ್ದೇವೆ ಎಂದು ಉತ್ತರಿಸಿದರು.
ಈ ವೇಳೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ವಿಫಲವಾದ ನಂತರ ಆಧುನಿಕ ಚಾಣಕ್ಯ ಎಂಬ ನಿಮ್ಮ ವ್ಯಕ್ತಿತ್ವಕ್ಕೆ ಹಿನ್ನಡೆ ಆಗಿದೆ ಅಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ಈ ಪ್ರಕರಣದಿಂದ ಚಾಣಕ್ಯನಿಗೆ ಹೋಲಿಕೆ ಮಾಡುವುದು ನಿಂತಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಅಮಿತ್ ಶಾ Vs ಶರದ್ ಪವಾರ್ – ‘ಮಹಾ’ ಚಾಣಕ್ಯ ಯಾರು?
ಚಾಣಕ್ಯ ಚಿತ್ರಣ ಬಿದ್ದು ಹೋಗಿದ್ದಕ್ಕೆ ನನಗೆ ಸಂತೋಷವಿದೆ. ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದ ನಂತರ ಸಮಸ್ಯೆ ಆರಂಭವಾಯಿತು. ನಾವು 105, ಶಿವಸೇನೆ 56 ಸ್ಥಾನ ಪಡೆದ ಹಿನ್ನೆಲೆಯಲ್ಲಿ ನಾವು ಸರ್ಕಾರ ರಚಿಸಲು ಅನುಮತಿ ನೀಡುವಂತೆ ರಾಜ್ಯಪಾಲರ ಬಳಿ ಹೋಗಬೇಕಿತ್ತು. ಆದರೆ ಯಾವಾಗ ಶರದ್ ಪವಾರ್ ಕಾಳುಗಳನ್ನು ಎಸೆದರೋ ಶಿವಸೇನೆ ಆ ಕಾಳುಗಳನ್ನು ತಿನ್ನಲು ಮುಗಿಬಿತ್ತು ಎಂದು ವ್ಯಂಗ್ಯ ರೂಪದಲ್ಲಿ ತಿವಿದರು.
ಚುನಾವಣಾ ಪ್ರಚಾರ ಆಗಿರಬಹುದು ಅಥವಾ ಸುದ್ದಿಗೋಷ್ಠಿ ಆಗಿರಬಹುದು ಎಲ್ಲ ಕಡೆ ನಾವು ಮುಖ್ಯಮಂತ್ರಿ ಬಿಜೆಪಿಯವರೇ ಆಗುತ್ತೇವೆ ಎಂದು ಹಲವು ಬಾರಿ ಹೇಳಿದ್ದೇವೆ. ಆದರೆ ಏನು ಮಾಡುವುದು? ನಮ್ಮ ಮೈತ್ರಿ ಪಕ್ಷ ಓಡಿ ಹೋಯಿತು. ಹೀಗಾಗಿ ನಾವು ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಒಂದು ವೇಳೆ ಶಿವಸೇನೆ ಚುನಾವಣೆಗೂ ಮೊದಲೇ ಈ ಬೇಡಿಕೆ ಇಟ್ಟಿದ್ದರೆ ನಾವು ಬೇರೆ ತೀರ್ಮಾನ ತೆಗೆದುಕೊಳ್ಳುತ್ತಿದ್ದೆವು. ಗೆದ್ದ ಪ್ರತಿ ಶಿವಸೇನಾ ಶಾಸಕ ನರೇಂದ್ರ ಮೋದಿಯವರ ಪ್ರಸಿದ್ಧಿಯನ್ನು ಪಡೆಯದೇ ನಾವು ಗೆದ್ದಿದ್ದೇವೆ ಎಂದು ಹೇಳಲಿ ನೋಡೋಣ? ಈ ಪ್ರಕರಣವನ್ನು ನಾವು ಪಾಠವಾಗಿ ಸ್ವೀಕರಿಸಿದ್ದೇವೆ. ವಿರೋಧ ಪಕ್ಷದಲ್ಲಿ ನಾವು ಕುಳಿತುಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.