ಕಲಬುರಗಿ: ನಮ್ಮ ಮುಗ್ಧ ರೈತರು ಕಷ್ಟಪಟ್ಟು ಹೈನುಗಾರಿಕೆ ಮಾಡಿ ಕೆಎಂಎಫ್‍ಗೆ ಹಾಲು ಸರಬರಾಜು ಮಾಡುತ್ತಿದ್ದಾರೆ. ಆದರೆ ಹೀಗೆ ಮಂಡಳಿಗೆ ಹೋದ ರೈತರ ಹಾಲು ಅಲ್ಲಿನ ಒಳ ರಾಜಕೀಯ ದ್ವೇಷದಿಂದ ಚರಂಡಿ ಪಾಲಾಗುತ್ತಿದೆ. ಇದು ಇದೀಗ ಕಲಬುರಗಿ-ಬೀದರ್-ಯಾದಗಿರಿ ಜಿಲ್ಲೆಯ ರೈತರ ಕೋಪ ನೆತ್ತಿಗೆರುವಂತೆ ಮಾಡಿದೆ.
ಹೌದು, ಕಲಬುರಗಿ ಕೆಎಂಎಫ್‍ನಲ್ಲಿ `ಹಾಲಾ’ಹಲ ಅಲ್ಲ ಭಾರೀ ಕೋಲಾಹಲವೇ ನಡೆದು ಹೋಗುತ್ತಿದೆ. ಕೆಎಂಎಫ್ ಆಡಳಿತ ಮಂಡಳಿ ನಿರ್ದೇಶಕರ ನಡುವೆ ಹೊಂದಾಣಿಕೆ ಕೊರತೆ ಉಂಟಾಗಿ ಆಂತರಿಕ ಫೈಟ್ ನಡೆದಿದ್ದು, ಪರಸ್ಪರ ಹಲ್ಲು ಕಚ್ಚಿ ಹಗೆ ರಾಜಕೀಯದಲ್ಲಿ ತೊಡಗಿದ್ದಾರೆ. ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೇ, ನಿರ್ದೇಶಕರ ನಡುವಿನ ಜಗಳದಲ್ಲಿ ಹೈನುಗಾರಿಕೆಯನ್ನೇ ನಂಬಿರುವ ರೈತರು ಬಡವಾಗುತ್ತಿದ್ದಾರೆ.
ಒಬ್ಬರ ಮೇಲೊಬ್ಬರು ದ್ವೇಷ ಸಾಧನೆಗೆ ಮುಂದಾಗಿರುವ ಕಲಬುರಗಿ ಕೆಎಂಎಫ್ ನಿರ್ದೇಶಕರು ತಮಗೆ ಆಗದಿರುವವರ ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೆ ನುಗ್ಗಿ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ಹಾಲು ಪರಿಶುದ್ಧವೋ ಅಲ್ಲವೋ ಎಂಬುದನ್ನು ವೈಜ್ಞಾನಿಕವಾಗಿ ಟೆಸ್ಟ್ ಮಾಡದೇ ಬರೀ ಬಾಯಲ್ಲಿ ಟೇಸ್ಟ್ ಮಾಡಿ ಹಾಲಿನ ಗುಣಮಟ್ಟ ನಿರ್ಧರಿಸುತ್ತಿದ್ದಾರೆ. ಲ್ಯಾಕ್ಟೋಮೀಟರ್‍ನಲ್ಲಿ ಹಾಲಿನ ಟೆಸ್ಟ್ ಕೂಡ ಮಾಡಲ್ಲ. ಕಲಬುರಗಿ ಕೆಎಂಎಫ್ ಅಧ್ಯಕ್ಷ ಆರ್. ಕೆ ಪಾಟೀಲ್ ಖುದ್ದು ಈ ಡರ್ಟಿ ಪಾಲಿಟಿಕ್ಸ್ ನಲ್ಲಿ ಮುಳುಗಿದ್ದಾರೆ.
ಹಾಲಿನಲ್ಲಿ 3.5ರಷ್ಟು ಫ್ಯಾಟ್ ಹಾಗೂ ಕನಿಷ್ಟ 29ರಷ್ಟು ಕರೆಕ್ಟ್ ಲ್ಯಾಕ್ಟೋ ಮೀಟರ್ ರೀಡಿಂಗ್ ಬರುವಷ್ಟು ಗುಣಮಟ್ಟ ಇರಬೇಕು ಎಂಬ ನಿಯಮವಿದೆ. ತಮಗೆ ಬೇಡವಾದ ಸಹಕಾರ ಸಂಘಗಳ ಹಾಲಿನಲ್ಲಿ ಸಕ್ಕರೆ ಅಂಶ ಇದೆ. ಉಪ್ಪಿನ ಅಂಶವಿದೆ ಅಂತ ಸುಮ್‍ಸುಮ್ನೆ ಹೇಳೋ ಈ ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ್, ಸ್ಟಾಟಲ್ಲೇ ಕ್ಯಾನ್‍ಗಟ್ಟಲೇ ಹಾಲನ್ನು ಚರಂಡಿಗೆ ಸುರಿಸುತ್ತಿದ್ದಾರೆ.
ಸದ್ಯ ಕಲಬುರಗಿ-ಬೀದರ್-ಯಾದಗಿರಿ ಜಿಲ್ಲೆಗಳಲ್ಲಿ ಬರ ಇರುವ ಹಿನ್ನೆಲೆಯಲ್ಲಿ ಜಾನುವಾರುಗಳು ಸರಿಯಾದ ಗುಣಮಟ್ಟದ ಹಾಲನ್ನು ನೀಡುತ್ತಿಲ್ಲ. ಇದನ್ನು ಪರಿಗಣನೆಗೆ ತೆಗೆದುಕೊಳ್ಳದ ಆರ್. ಕೆ ಪಾಟೀಲ್, ನೀವು ಕಳಪೆ ಹಾಲು ಪೂರೈಸಿದ್ದೀರಿ ಅನ್ನೋ ಕಾರಣ ಟಾರ್ಗೆಟ್ ಆಗಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅಂತ ಹಣ ಕೂಡ ರಿಲೀಸ್ ಮಾಡುತ್ತಿಲ್ಲ. ಹೀಗಾಗಿ ಹೈನುಗಾರಿಕೆ ನಂಬಿರುವ ರೈತರ ಅಕೌಂಟ್‍ಗಳಿಗೆ ಹಣ ತಲುಪುತ್ತಿಲ್ಲ. ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಮುಖವಾಗಿ ಕಲಬುರಗಿ ಮತ್ತು ಆಳಂದ ಶೀತಲಿಕರಣ ಘಟಕದಿಂದ ಬರುವ ಹಾಲನ್ನು ಆರ್.ಕೆ.ಪಾಟೀಲ್ ಚರಂಡಿ ಪಾಲು ಮಾಡುತ್ತಿದ್ದಾರೆ. ಈ ಕುರಿತು ಕೆಎಂಎಫ್‍ನ ಕಲಬುರಗಿ-ಬೀದರ್-ಯಾದಗಿರಿ ವಿಭಾಗದ ಎಂಡಿ ಕಮಕೇರಿಯನ್ನು ಕೇಳಿದರೆ, ಅವರು ಹಾರಿಕೆಯ ಉತ್ತರ ನೀಡುತ್ತಾರೆ. ಇಲ್ಲಿ ಯಾವ ರಾಜಕೀಯ ಸಹ ನಡೆಯುತ್ತಿಲ್ಲ ಎಂದು ಸುಮ್ಮನಾಗುತ್ತಾರೆ. ಇಷ್ಟೆಲ್ಲ ಸಾಕ್ಷಿ ತೋರಿಸಿದರೂ ಅದ್ಯಾಕೋ ಏನೋ ಕಮಕೇರಿ ಸಾಹೇಬ್ರೂ ಆರ್. ಕೆ ಪಾಟೀಲ್ ವಿರುದ್ಧ ಕಮಕ್ ಕಿಮಕ್ ಅಂತಿಲ್ಲ.
ಕಮಕೇರಿ ಮಾತನ್ನು ಕೇಳಿದರೆ ಈ ಸಮಸ್ಯೆ ಇಲ್ಲಿ ಬಗೆಹರಿಯೋವಂತೆ ಕಾಣುತ್ತಿಲ್ಲ. ರೈತರು ಸಂಕಷ್ಟಕ್ಕೀಡಾಗೋದು ತಪ್ಪೊಲ್ಲ ಅನ್ನಿಸುತ್ತದೆ. ಕೂಡಲೇ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಕಂಡಕಂಡಲ್ಲಿ ನಾನ್ಯಾರು ಗೊತ್ತಾ ಎಂದು ಕೇಳುವ ಪಶು ಸಂಗೋಪನಾ ಸಚಿವ ಪ್ರಭುಚೌಹಾಣ್ ಇತ್ತ ಗಮನಹರಿಸಬೇಕಿದೆ. ದಿನವೂ ಸಾವಿರಾರು ಲೀಟರ್ ಹಾಲನ್ನು ಚರಂಡಿ ಪಾಲು ಮಾಡುತ್ತಾ ಡರ್ಟಿ ಪಾಲಿಟಿಕ್ಸ್ ನಲ್ಲಿ ತೊಡಗಿರುವ ಆರ್.ಕೆ.ಪಾಟೀಲ್ ರಾಜಕೀಯಕ್ಕೆ ಕಡಿವಾಣ ಹಾಕಬೇಕಿದೆ.