ಬೆಂಗಳೂರು: ಸೆಕ್ಯುರಿಟಿ ಕೆಲಸ ಅರಸಿ ಅಸ್ಸಾಂನಿಂದ ಸಿಲಿಕಾನ್ ಸಿಟಿಗೆ ಬಂದಿದ್ದ ಆರೋಪಿಗಳು, ಸಮಯವನ್ನೂ ಲೆಕ್ಕಿಸದೆ ಹೆಚ್ಚುವರಿ ಕೆಲಸ ಮಾಡಿ ಮಾಲೀಕನ ನಂಬಿಕೆ ಗಿಟ್ಟಿಸಿಕೊಂಡು ನಂತರ ರಾತ್ರೋ ರಾತ್ರಿ ಲೋಡ್‍ಗಟ್ಟಲೇ ಕಬ್ಬಿಣವನ್ನು ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.
ಹೆಚ್‍ಎಎಲ್ ಬಳಿಯ ಹೊಂಬಾಳೆ ಕನ್‍ಸ್ಟ್ರಕ್ಷನ್ ಹಾಗೂ ಕಶ್ಯಪ್ ಗ್ರೂಪ್ ಕಂಪನಿಗಳಲ್ಲಿ ಕಬ್ಬಿಣ ಸಾಗಿಸಿದ್ದ ಆರೋಪಿಗಳಾದ ಸಲ್ಮಾನ್, ಮಂಜಿತ್, ರಂಜಿತ್ ಹಾಗೂ ಪಪ್ಪು ಖತರ್ನಾಕ್ ಸೆಕ್ಯುರಿಟಿ ಗಾರ್ಡ್ ಗಳನ್ನು ಹೆಚ್‍ಎಎಲ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 14 ಲಕ್ಷ ರೂ. ಮೌಲ್ಯದ 14 ಟನ್ ಕಬ್ಬಿಣವನ್ನು ವಶಪಡಿಸಿಕೊಳ್ಳಲಾಗಿದೆ.
ಸೆಕ್ಯುರಿಟಿ ಕೆಲಸ ಅರಸಿ ಅಸ್ಸಾಂನಿಂದ ಸಿಲಿಕಾನ್ ಸಿಟಿಗೆ ಬರುತ್ತಿದ್ದ ಆರೋಪಿಗಳು, ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ನಂತರ ಕೆಲಸದ ಅವಧಿ ಪೂರ್ಣಗೊಂಡರೂ, ಮನೆಗೆ ತೆರಳದೇ ಹೆಚ್ಚುವರಿ ಕೆಲಸ ಮಾಡುತ್ತಿದ್ದರು. ಈ ಕೆಲಸಕ್ಕೆ ಹೆಚ್ಚುವರಿ ಸಂಬಳವನ್ನೂ ಕೇಳುತ್ತಿರಲಿಲ್ಲ. ಇದರಿಂದಾಗಿ ಮಾಲೀಕರಿಗೆ ಸೆಕ್ಯುರಿಟಿ ಗಾರ್ಡ್ ಗಳ ಮೇಲೆ ಅಪಾರ ನಂಬಿಕೆ ಬಂದಿತ್ತು. ಹೀಗೆ ನಂಬಿಕಸ್ಥರಂತೆ ವರ್ತಿಸಿ ರಾತ್ರೋ ರಾತ್ರಿ ಲಾರಿಯಲ್ಲಿ ಲೋಡ್ ಗಟ್ಟಲೇ ಕಬ್ಬಿಣವನ್ನು ಸಾಗಿಸಿದ್ದರು.