– 7 ವರ್ಷದ ಮಗುವಿನ ಮೇಲೂ ಹಲ್ಲೆ
ಮೀರತ್: ಕುಡಿದ ಮತ್ತಿನಲ್ಲಿ ವ್ಯಕ್ತಿಯನ್ನು ಥಳಿಸಿ, ಅವರ 7 ವರ್ಷದ ಮಗನ ಮೇಲೂ ಹಲ್ಲೆ ಮಾಡಿದ ಆರೋಪವೊಂದು ಟೀಂ ಇಂಡಿಯಾ ಮಾಜಿ ಆಟಗಾರ ಪ್ರವೀಣ್ ಕುಮಾರ್ ವಿರುದ್ಧ ಕೇಳಿ ಬಂದಿದೆ.
ಉತ್ತರ ಪ್ರದೇಶದ ಮೀರತ್‍ನಲ್ಲಿ ವಾಸಿಸುತ್ತಿರುವ ಪ್ರವೀಣ್ ಕುಮಾರ್ ಅವರ ಮೇಲೆ ನೆರೆಮನೆಯ ನಿವಾಸಿ ದೀಪಕ್ ಶರ್ಮಾ ಗಂಭೀರ ಆರೋಪವನ್ನು ಮಾಡಿದ್ದು, ಕುಡಿದ ಮತ್ತಿನಲ್ಲಿ ಪ್ರವೀಣ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಈ ಘಟನೆ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದು, ಪ್ರಕರಣ ಕುರಿತು ಸ್ಥಳೀಯ ಎಸ್‍ಪಿ ವಿಚಾರಣೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಪೊಲೀಸ್ ಮಾಹಿತಿ ಅನ್ವಯ, ಇಬ್ಬರೂ ನೆರೆಮನೆಯ ನಿವಾಸಿಗಳಾಗಿದ್ದು, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಪಡೆದ ಹೇಳಿಕೆಯ ಆಧಾರವಾಗಿ ನಾವು ಹೆಚ್ಚಿನ ವಿಚಾರಣೆಯನ್ನು ನಡೆಸಿದ್ದಾಗಿ ಎಸ್‍ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ದೀಪಕ್ ಶರ್ಮಾ ಪೊಲೀಸರ ವಿರುದ್ಧವೂ ಆರೋಪ ಮಾಡಿದ್ದು, ಘಟನೆಯ ಬಗ್ಗೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಪೊಲೀಸರು ನಿರಾಕರಿಸಿದ್ದರು. ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರಾದ ಕಾರಣ ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕ ಮಾಡಲು ಹೇಳಿದ್ದರು ಎಂದು ತಿಳಿಸಿದ್ದಾರೆ.
ದೀಪಕ್ ಶರ್ಮಾ ಹೇಳಿಕೆ ಪ್ರಕಾರ, ‘ಸಂಜೆ 3 ಗಂಟೆಯ ಸಮಯದಲ್ಲಿ ನನ್ನ ಮಗನನ್ನು ಕರೆದುಕೊಂಡು ಹೋಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದೆ. ಅಲ್ಲಿಗೆ ಬಂದ ಪ್ರವೀಣ್ ಕುಮಾರ್ ಮೊದಲು ಬಸ್ ಚಾಲಕನನ್ನು ನಿಂದಿಸಿದ್ದರು. ಆ ಬಳಿಕ ನನ್ನನ್ನು ನಿಂದಿಸಿದರು. ಆ ವೇಳೆ ಅವರು ಸ್ಥಿತಿ ಉತ್ತಮವಾಗಿರಲಿಲ್ಲ. ನನ್ನನ್ನು ಥಳಿಸಿ, ಕೈ ಮುರಿದರು. ಅಲ್ಲದೇ ನನ್ನ ಮಗನನ್ನು ಕೂಡ ತಳ್ಳಿದರು. ಇದರಿಂದ ಮಗನ ಬೆನ್ನಿಗೆ ಗಾಯವಾಗಿದೆ. ಆದರೆ ಈಗ ಪೊಲೀಸರು ಪ್ರಕರಣವನ್ನು ರಾಜಿ ಮಾಡಿಕೊಳ್ಳಲು ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೇ ನನಗೆ ಕೊಲೆ ಬೆದರಿಕೆಗಳು ಕೂಡ ಬರುತ್ತಿದೆ ಎಂದಿದ್ದಾರೆ. ಪ್ರಕರಣದ ಬಗ್ಗೆ ಪ್ರವೀಣ್ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
2007ರಲ್ಲಿ ಪಾಕ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಪ್ರವೀಣ್ ಕುಮಾರ್ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. 2018 ಅಕ್ಟೋಬರ್ ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. 68 ಏಕದಿನ ಪಂದ್ಯಗಳನ್ನು ಆಡಿರುವ ಪ್ರವೀಣ್ 77 ವಿಕೆಟ್ ಪಡೆದಿದ್ದು, 6 ಟೆಸ್ಟ್ ಪಂದ್ಯಗಳಿಂದ 27 ವಿಕೆಟ್ ಹಾಗೂ 10 ಟಿ20 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ.