– ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭ
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಭವಿಷ್ಯ ನಿರ್ಧರಿಸುವ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.
ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ನಡೆದಿದ್ದ ಮತದಾನದ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಿ ಅನರ್ಹ ಎನಿಸಿಕೊಂಡಿರುವ 13 ಮಂದಿಯಲ್ಲಿ ಯಾರನ್ನ ಮತದಾರರು ಅನರ್ಹರನ್ನಾಗಿ ಉಳಿಸ್ತಾರೆ, ಯಾರಿಗೆ ಅರ್ಹ ಪಟ್ಟ ಕೊಟ್ಟು ಮತ್ತೆ ವಿಧಾನಸಭೆಗೆ ಕಳಿಸ್ತಾರೆ ಅನ್ನೋದು ಗೊತ್ತಾಗಲಿದೆ.
ಉಪ ಚುನಾವಣೆಯಲ್ಲಿ ರಾಣೇಬೆನ್ನೂರಿನ ಮಾಜಿ ಶಾಸಕ ಆರ್ ಶಂಕರ್ ಮತ್ತು ಶಿವಾಜಿನಗರದ ಮಾಜಿ ಶಾಸಕ ರೋಷನ್‍ಬೇಗ್ ಸ್ಪರ್ಧೆ ಮಾಡಿಲ್ಲ. ಹೊಸಕೋಟೆ, ವಿಜಯನಗರ, ಗೋಕಾಕ್, ಅಥಣಿ, ಕಾಗವಾಡದಲ್ಲಿ ಎದ್ದಿದ್ದ ಬಂಡಾಯದ ಬಿಸಿ ವಲಸೆ ಬಂದು ಬಿಜೆಪಿ ಚಿಹ್ನೆಯಡಿ ಅಖಾಡಕ್ಕಿಳಿದ ಅನರ್ಹರಿಗೆ ಆಘಾತ ಕೊಡುತ್ತೋ ಅಥವಾ ಬಂಡಾಯಕ್ಕೆ ಸೆಡ್ಡು ಹೊಡೆದು ಗೆದ್ದೇ ಬಿಡುತ್ತಾರಾ ಅನ್ನೋ ಪ್ರಶ್ನೆಗಳಿಗೆ ಬೆಳಗ್ಗೆ 11 ಗಂಟೆಯಷ್ಟೊತ್ತಿಗೆ ಬಹುತೇಕ ಸ್ಪಷ್ಟ ಉತ್ತರ ಸಿಗಲಿದೆ.
ಬಾಕಿ ಇರುವ ಮೂರು ವರ್ಷ ಸ್ಥಿರ ಸರ್ಕಾರವೇ ಇರಲಿ, ಮಧ್ಯಂತರ ಚುನಾವಣೆಯೇ ಬೇಡ ಅನ್ನೋ ನಿರ್ಧಾರಕ್ಕೆ ಮತದಾರರು ಬಂದಿದ್ದಾರಾ ಅಥವಾ ನಾವು ಗೆಲ್ಲಿಸಿ ಕಳುಹಿಸಿದ್ದವರು ಬಿಜೆಪಿಗೆ ನೆಗೆದು ನಮಗೆ ಮೋಸ ಮಾಡಿದರು ಅನ್ನೋ ಸಿಟ್ಟಲ್ಲಿ ಸೋಲಿನ ಪಾಠ ಕಲಿಸ್ತಾರಾ..?, ಕಾಂಗ್ರೆಸ್ಸಿನ ಕಚ್ಚಾಟದಲ್ಲಿ ಏಕಾಂಗಿ ಆಗಿರುವ ಸಿದ್ದರಾಮಯ್ಯ ಒಂಟಿ ಹೋರಾಟ ಉಪ ಚುನಾವಣೆಯಲ್ಲಿ ಫಲ ಕೊಡುತ್ತಾ..?, ದಿಕ್ಕು ತಪ್ಪಿರುವ ಜೆಡಿಎಸ್‍ನಲ್ಲಿ ಕುದಿಯುತ್ತಿರುವ ಅಸಮಾಧಾನದ ಬೆಂಕಿಗೆ ಉಪ ಚುನಾವಣೆ ಫಲಿತಾಂಶ ತುಪ್ಪ ಸುರಿಯುತ್ತಾ..? ಸರ್ಕಾರವನ್ನು ಸುಭದ್ರಗೊಳಿಸಲು ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಕೈ ಹಾಕಲು ಬಿಜೆಪಿಗೆ ಪ್ರೇರೆಪಿಸುತ್ತಾ ಈ ಎಲ್ಲ ಪ್ರಶ್ನೆಗಳಿಗೆ ಇವತ್ತಿನ ಫಲಿತಾಂಶವೇ ಉತ್ತರ ನೀಡಲಿದೆ.