ಫಲಿತಾಂಶಕ್ಕೂ ಮುನ್ನವೇ ಸೋಮಶೇಖರ್ ಅಸಮಾಧಾನ

Public TV
3 Min Read
ST Somashekhar

– ಅನರ್ಹರಿಗೆ ಮಂತ್ರಿಗಿರಿ ಕೊಡಲ್ಲಾಂದ್ರೆ ಮೊದಲೇ ಹೇಳ್ಬೇಕಿತ್ತು
– ಬಿಜೆಪಿ ಸರ್ಕಾರ ಆಗೋದು ಬೇಡ ಅನ್ಬೇಕಿತ್ತು
– ಕಾಂಗ್ರೆಸ್‍ನಲ್ಲಿ ಇದ್ದೀದ್ರೆ ಸಮಾಧಿ ಆಗುತ್ತಿದ್ವಿ

ಬೆಂಗಳೂರು: ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅರ್ನಹ ಶಾಸಕರಿಗೆ ಸಚಿವಸ್ಥಾನ ನೀಡಿದರೆ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗುತ್ತದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಇದನ್ನು ಬಿಜೆಪಿಯವರು ಮೊದಲೇ ಹೇಳಬೇಕಿತ್ತು. ಬಿಜೆಪಿ ಸರ್ಕಾರ ರಚನೆ ಆಗುವುದು ಬೇಡ ಅಂತ ಹೇಳಬೇಕಿತ್ತು. ಸಚಿವಸ್ಥಾನ ನೀಡಿದರೆ ಅಸಮಾಧಾನ ಉಂಟಾಗುತ್ತದೆ ಅಂತ ಹೇಳುವುದಾದರೆ ನಮ್ಮನ್ನ ಪಕ್ಷಕ್ಕೆ ಸೇರಿಸಿಕೊಳ್ಳಬಾರದಿತ್ತು ಎಂದು ಗುಡುಗಿದರು. ಇದನ್ನೂ ಓದಿ: ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

bjp mlas 3

ಶಿವಾಜಿ ನಗರ ಉಪ ಚುನಾವಣೆ ಸ್ಪರ್ಧೆಗೆ ರೋಷನ್ ಬೇಗ್ ಮುಂದಾಗಲಿಲ್ಲ. ರಾಣೇಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ, ಮಂತ್ರಿ ಮಾಡುತ್ತಾರೆ ಎಂಬ ಮಾಹಿತಿ ಇದೆ. ಅನರ್ಹರಿಗೆ ಸಚಿವ ಸ್ಥಾನ ತಪ್ಪುವುದಿಲ್ಲ ಎಂದರು.

ನಾವು ಕಾಂಗ್ರೆಸ್‍ನಲ್ಲಿ ಇದ್ದಿದ್ದರೆ ಸಮಾಧಿ ಆಗುತ್ತಿದ್ದೇವು. ಈಗ ಸಮಾಧಿಯಿಂದ ಹೊರಗೆ ಬಂದಿದ್ದೇವೆ. ಟೀಕೆ ಮಾಡುವವರು ಮಾಡಲಿ. ನಾವು ಮಾತ್ರ ಚೆನ್ನಾಗಿದ್ದೇವೆ. ನಮ್ಮ ವಿರುದ್ಧ ಕಾಂಗ್ರೆಸ್‍ನವರಿಗೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಈಗ ಆರೋಪ ಮಾಡಿದರೆ ಏನು ಪ್ರಯೋಜನ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದಾರೆ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ST Somashekar A

ಈ ಹಿಂದೆ ನಾನೊಬ್ಬನೇ ಚುನಾವಣೆ ಎದುರಿಸಿದ್ದೆ. ಆದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯವರನ್ನು ಒಗ್ಗೂಡಿಸಲಾಯಿತು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಯಕರು ಪ್ರಚಾರಕ್ಕೆ ಬಂದಿದ್ದರು. 641 ಬೂತ್‍ಗಳಲ್ಲಿ ಎಲ್ಲ ರೀತಿಯ ಅಧ್ಯಯನ ಮಾಡಿದ್ದೇನೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ.

ಉಪ ಚುನಾವಣೆ ಫಲಿತಾಂಶದ ಬಳಿಕ ಕ್ಷೇತ್ರದ ವಿವಿಧೆಡೆ ಹೋಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಗೆದ್ದವರು ಯಾರೂ ಸೋಮವಾರ ಕ್ಷೇತ್ರ ಬಿಟ್ಟು ಬರುವುದಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಅನರ್ಹ ಶಾಸಕರೆಲ್ಲರೂ ಒಟ್ಟಾಗಿ ಸೇರುತ್ತೇವೆ ಎಂದು ತಿಳಿಸಿದರು.

r ashok

ಒಕ್ಕಲಿಗ ನಾಯಕನಾಗಲು ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಇದ್ದಾಗಲೂ ನಾನು ಪೈಪೋಟಿ ಮಾಡಿಲ್ಲ. ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಈಗ ಸಚಿವ ಆರ್.ಅಶೋಕ್ ಅವರಿಗೆ ಪೈಪೋಟಿ ನೀಡಿ ಒಕ್ಕಲಿಗ ನಾಯಕನಾಗುವ ಆಸೆ ನನ್ನಗಿಲ್ಲ. ಬಿಜೆಪಿಗೆ ಬಂದಿದ್ದೇನೆ. ಇಲ್ಲಿ ಇರುವಷ್ಟು ದಿನ ಪ್ರಾಮಾಣಿಕನಾಗಿ ಇರುತ್ತೇನೆ. ಇಲ್ಲಿಂದ ಬೇರೆ ಕಡೆ ಹೋಗುವ ಯೋಚನೆ ಮಾಡಿಲ್ಲ. ಮಂತ್ರಿ ಮಾಡಿ ಎಂದು ಎಂದಿಗೂ ಕೇಳುವುದಿಲ್ಲ. ಇಂತಹ ಖಾತೆ ಬೇಕು ಅಂತ ಕಂಡಿಷನ್ ಹಾಕಿಲ್ಲ. ಮಂತ್ರಿ ಸ್ಥಾನವನ್ನು ಅವರೇ ಕೊಟ್ಟರೆ ಸ್ವೀಕರಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್- ಜೆಡಿಎಸ್ ಒಪ್ಪಂದದ ಆಡಿಯೋ ಈಗಲೂ ನನ್ನ ಬಳಿಯಿದೆ. ಸೂಕ್ತ ಸಮಯ ಬಂದಾಗ ಆಡಿಯೋ ಬಿಡುತ್ತೇಮೆ. ಆ ಲೀಡರ್ ಯಾರು ಅಂತ ಹೇಳುತ್ತೇನೆ. ಮತ್ತೊಂದು ಸುತ್ತಿನ ಆಪರೇಷನ್ ಕಮಲ ಮಾಡುವ ಅವಶ್ಯಕತೆ ಬೀಳಲ್ಲ. 9 ಜನ ಜೆಡಿಎಸ್ ಶಾಸಕರು, 4 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತೇವೆ ಅಂದಿದ್ದಾರೆ. ಆದರೆ ನಾವು ನಮ್ಮ ಕಷ್ಟ ಹೇಳಿದ್ದೇವೆ ಎಂದು ಹೊಸ ಬಾಂಬ್ ಸಿಡಿಸಿದರು.

Congress BJP JDS

ನಮ್ಮ ವಿರುದ್ಧ ಅಪಪ್ರಚಾರ ಮಾಡಿದವರಿಗೆ ದೇವರು ಆರೋಗ್ಯ ಎಲ್ಲವನ್ನೂ ಕೊಟ್ಟು ಒಳ್ಳೆಯದು ಮಾಡಲಿ. ನಾವು ಮೂರ್ನಾಲ್ಕು ತಿಂಗಳು ನೋವು ಅನುಭವಿಸಿದ್ದೇವೆ. ಈ ಎಲ್ಲ ನೋವನ್ನು ರಾಜೀನಾಮೆ ಕೊಡಲು ಮುಂದಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ತಿಳಿಸಿದ್ದೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *