– ಇಂಗ್ಲಿಷ್ ಮಾತನಾಡಿದ್ದಕ್ಕೆ ರೊಚ್ಚಿಗೆದ್ದು ಕೊಲೆ
ಮನಿಲಾ: ಯುವಕನೊಬ್ಬ ತನ್ನೊಂದಿಗೆ ಇಂಗ್ಲೀಷ್ ಮಾತನಾಡಿದ ಮಹಿಳೆಯನ್ನು ಕೊಲೆಗೈದು, ಆಕೆಯ ಮೆದುಳನ್ನೇ ತಿಂದಿರುವ ಘಟನೆ ಫಿಲಿಪೈನ್ಸ್ ದೇಶದ ತಾಲಿಸಯನ್ ಪಟ್ಟಣದಲ್ಲಿ ನಡೆದಿದೆ.
21 ವರ್ಷದ ಲಾಯ್ಡ್ ಬಾಗ್ಟಾಂಗ್ ಮಹಿಳೆಯನ್ನು ಕೊಲೆಗೈದ ಆರೋಪಿ ಎಂದು ಪೊಲೀಸರು ಗುರುತಿಸಿದ್ದು, ಆತನನ್ನು ಬಂಧಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಕುಡಿದ ಮತ್ತಿನಲ್ಲಿದ್ದ ಹಾಗೂ ಹಸಿವಿನಲ್ಲಿದ್ದ ಎಂದು ಪೊಲೀಸರು ಹೇಳಿದ್ದಾರೆ.
ತಾಲಿಸಯನ್ ಪಟ್ಟಣದ ಪಂಟಾ ಸ್ಯಾಂಟಿಯಾಗೊ ನಿವಾಸಿಯ ಮಹಿಳೆಯ ರುಂಡವಿಲ್ಲದ ದೇಹ ಪತ್ತೆಯಾಗಿತ್ತು. ಪ್ರಕರಣದ ಕುರಿತು ಮಾಹಿತಿ ನೀಡಿದ ತಾಲಿಯಸ್ ಪಟ್ಟಣದ ಪೊಲೀಸ್ ಮುಖ್ಯಸ್ಥರು, ಆರೋಪಿ ಯುವಕನೊಂದಿಗೆ ಮಹಿಳೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದ್ದು, ಆತನಿಗೆ ಅದು ಅರ್ಥವಾಗದ ಕಾರಣ ಕೋಪಗೊಂಡು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಮಹಿಳೆಯ ಕೊಲೆಯನ್ನು ತಾನೇ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದು, ಮಹಿಳೆಯ ರುಂಡ ತನ್ನ ಮನೆಯಲ್ಲಿರುವ ಸಂಗತಿಯನ್ನು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಅಂಶಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಆರೋಪಿಯ ಮನಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಮನೋವೈದ್ಯರನ್ನು ಸಂಪರ್ಕ ಮಾಡುವುದಾಗಿ ಪೊಲೀಸರು ತಿಳಿಸಿದ್ದು, ಸದ್ಯ ಬಂಧಿಸುವ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಗುರುತಿಸಲು ಪೊಲೀಸರು ಕುಟುಂಬದವರ ಮೊರೆ ಹೋಗಿದ್ದಾರೆ.