ಮಂಗಳೂರು/ಮಡಿಕೇರಿ: ಡಿಸೆಂಬರ್ 6 ಎಂದಾಕ್ಷಣ ಅಂದು ಕರಾಳ ದಿನ, ವಿಜಯೋತ್ಸವದ ದಿನ ಎಂದು ಈ ಹಿಂದೆಲ್ಲಾ ಆಚರಣೆ ಮಾಡುತ್ತಿದ್ದರು. ಆದರೆ ಈ ವರ್ಷ ಈಗಾಗಲೇ ಅಯೋಧ್ಯೆ ವಿವಾದಕ್ಕೆ ತೆರೆ ಬಿದ್ದಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಅನುಮತಿ ನೀಡಿದ್ದು, ಈ ತೀರ್ಪುನ್ನು ದೇಶದ ಜನ ಸ್ವಾಗತಿಸಿದ್ದು, ಎಲ್ಲರೂ ಶಾಂತಿಯುತವಾಗಿ ಕೋರ್ಟ್ ಆದೇಶಕ್ಕೆ ಗೌರವ ಕೊಟ್ಟಿದ್ದಾರೆ. ಆದರೂ ಡಿಸೆಂಬರ್ 6 ಬಾಬ್ರಿ ಮಸೀದಿಯನ್ನು ಕೆಡವಿದ ದಿನವಾಗಿರುವುದರಿಂದ ಶುಕ್ರವಾರ ರಾಜ್ಯದ ಸೂಕ್ಷ್ಮ ನಗರವಾದ ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಯನ್ನು ಪೊಲೀಸ್ ಕಮೀಷನರ್ ಹೊರಡಿಸಿದ್ದಾರೆ.
ಡಿಸೆಂಬರ್ 6ರ ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಗೆ ಪೊಲೀಸ್ ಕಮೀಷನರ್ ಡಾ.ಪಿ ಎಸ್ ಹರ್ಷ ಆದೇಶಿಸಿದ್ದಾರೆ. ಈ ಸಂದರ್ಭ ವಿಜಯೋತ್ಸವ, ಮೆರವಣಿಗೆ, ಕರಾಳ ದಿನ, ಪ್ರತಿಭಟನೆಗಳನ್ನು ನಡೆಸದಂತೆ ಆದೇಶಿಸಿದ್ದಾರೆ. ನಗರದ ಜನತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ ಎಸ್ ಹರ್ಷ ವಿನಂತಿಸಿಕೊಂಡಿದ್ದಾರೆ.
ಇತ್ತ ಮಡಿಕೇರಿ ಜಿಲ್ಲೆಯಾದ್ಯಂತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಆದೇಶ ಹೊರಡಿಸಿದ್ದಾರೆ. ಕೊಡಗು ಮೊದಲೇ ಮತೀಯವಾಗಿ ಸೂಕ್ಷ್ಮ ಜಿಲ್ಲೆಯಾದ್ದರಿಂದ ಡಿಸೆಂಬರ್ 6 ರಂದು ಬಾಬ್ರಿ ಮಸೀದಿ ದ್ವಂಸದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಎರಡೂ ಕೋಮಿನ ಸದಸ್ಯರು ಕರಾಳ ದಿನ ಹಾಗೂ ವಿಜಯೋತ್ಸವ ಆಚರಿಸದಂತೆ ಕೊಡಗು ಎಸ್ಪಿ ಡಾ.ಸುಮನ್ ಡಿ ಪನ್ನೇಕರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.