15 ಕ್ಷೇತ್ರಗಳಿಗೆ ಇಂದು ಮತದಾನ- ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ

Public TV
2 Min Read
vote 3

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅಳಿವು-ಉಳಿವು, ಕಾಂಗ್ರೆಸ್-ಜೆಡಿಎಸ್ ನಾಯಕರ ಮರು ಮೈತ್ರಿ, ಅನರ್ಹರ ಅರ್ಹತೆಯ ಸವಾಲು ಎಲ್ಲವನ್ನೂ ನಿರ್ಣಯಿಸಲಿರೋ ದಿನ ಬಂದೇ ಬಿಟ್ಟಿದೆ. 15 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. ಹೊಸಕೋಟೆ, ಚಿಕ್ಕಬಳ್ಳಾಪುರ, ಕೆಆರ್ ಪುರ, ಶಿವಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್ ಪೇಟೆ, ಹುಣಸೂರು, ಹಿರೇಕೆರೂರು, ರಾಣೆಬೆನ್ನೂರು, ಹೊಸಪೇಟೆ, ಯಲ್ಲಾಪುರ, ಕಾಗವಾಡ, ಅಥಣಿ, ಗೋಕಾಕ್ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಲಿದೆ.

ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರ 165 ಅಭ್ಯರ್ಥಿಗಳ ಹಣೆಬರಹ ಇವಿಎಂಗಳಲ್ಲಿ ಅಡಕವಾಗುತ್ತಾ ಹೋಗುತ್ತದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ.

Election a

15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 165 ಮಂದಿ ಕಣದಲ್ಲಿದ್ದಾರೆ. ಬೆಂಗಳೂರಿನ ಶಿವಾಜಿನಗರದಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 37,82,681 ಮಂದಿ ಮತದಾರರಿದ್ದು, ಇದರಲ್ಲಿ ಪುರುಷ ಮತದಾರರು 18,52,027 ಮಹಿಳಾ ಮತದಾರರು 19,25,529 ಮಂದಿ ಇದ್ದಾರೆ. 4,185 ಕಡೆಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಸೂಕ್ತ ಭದ್ರತೆಗಾಗಿ 42,509 ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. 11,241 ಮಂದಿ ಪೊಲೀಸ್ ಸಿಬ್ಬಂದಿ, 2,511,900 ಸಿಆರ್‍ಪಿಎಫ್ ಸಿಬ್ಬಂದಿ ಹಾಗೂ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾಲ್ಕು ಕ್ಷೇತ್ರಗಳಲ್ಲಿ 5,988 ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೆ.ಆರ್.ಪುರ ಕ್ಷೇತ್ರಕ್ಕೆ ಐಟಿಐ ವಿದ್ಯಾಮಂದಿರ, ಯಶವಂತಪುರ ಕ್ಷೇತ್ರಕ್ಕೆ ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಮಹಾಲಕ್ಷ್ಮಿ ಲೇಔಟ್‍ಗೆ ವಿದ್ಯಾವರ್ಧಕ ಸಂಘದ ಹೈಸ್ಕೂಲ್, ಶಿವಾಜಿನಗರ ಕ್ಷೇತ್ರಕ್ಕೆ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ.

Election b

ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,361 ಮತಗಟ್ಟೆಗಳಿವೆ. ಈ ಪೈಕಿ 12 `ಸಖಿ’ ಮತಗಟ್ಟೆ, 4 ಮಾದರಿ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲೂ ಮೆಡಿಕಲ್ ಕಿಟ್ ನೀಡಲಾಗಿದೆ. 15 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ರಜೆ ಕೂಡ ಘೋಷಣೆ ಮಾಡಲಾಗಿದೆ.

ಒಟ್ಟಾರೆ ಸಿಎಂ ಯಡಿಯೂರಪ್ಪ ಅವರಿಗೆ ಈ ಉಪಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದು, ಅನರ್ಹರ ಪರ ತಾವೇ ಖುದ್ದಾಗಿ ಪ್ರಚಾರ ನಡೆಸಿದ್ದಾರೆ. 15 ಕ್ಷೇತ್ರಗಳ ಪೈಕಿ ಸರ್ಕಾರ ಉಳಿಸಿಕೊಳ್ಳಲು 7 ಸ್ಥಾನಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಇತ್ತ ಪ್ರತಿಪಕ್ಷಗಳು ಸರ್ಕಾರ ಪತನವಾಗಲಿದೆ ಎಂದು ಮೈತ್ರಿ ಮಾತುಕತೆಗೆ ನಾಂದಿ ಹಾಡಿವೆ. ಎಲ್ಲಾ ಅನರ್ಹರನ್ನು ಸೋಲಿಸಬೇಕೆಂದು ಕಾಂಗ್ರೆಸ್ ಶಪಥ ಮಾಡಿದೆ. 3 ಕ್ಷೇತ್ರಗಳಲ್ಲಿ ಜೆಡಿಎಸ್ ಉಳಿಸಿಕೊಳ್ಳಲು ದಳಪತಿಗಳು ಹೋರಾಟ ಮಾಡಿದ್ದಾರೆ. ಈ ಎಲ್ಲದಕ್ಕೂ ತೆರೆಬಿದ್ದಿದ್ದು, ಮತದಾರರು ಇಂದು ಅಂತಿಮ ತೀರ್ಪು ನೀಡಲಿದ್ದಾರೆ. ಡಿಸೆಂಬರ್ 9 ರಂದು 15 ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಈಗಾಗಲೇ ಢವಢವ ಶುರುವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *