ಲಕ್ನೋ: 6 ವರ್ಷದ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ 8ನೇ ತರಗತಿ ವಿದ್ಯಾರ್ಥಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖಿಮ್‍ಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ.
ಲಖಿಮ್‍ಪುರ ಖೇರಿ ಜಿಲ್ಲೆಯ ಗೋಲಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಾಲಕಿ ತನ್ನ ಮನೆಯ ಆವರಣದಲ್ಲಿ ಆಟವಾಡುತ್ತಿದ್ದಾಗ ಆರೋಪಿ 8ನೇ ತರಗತಿ ಬಾಲಕ ಚಾಕಲೇಟ್ ಆಸೆ ತೋರಿಸಿದ್ದಾನೆ. ನಂತರ ನಮ್ಮ ಮನೆಯಲ್ಲಿ ಆಟ ಆಡೋಣ ಬಾ ಎಂದು ಪುಸಲಾಯಿಸಿ ಬಾಲಕಿಯನ್ನು ಕರೆದೊಯ್ದಿದ್ದಾನೆ. ನಂತರ ತನ್ನ ಮನೆಯಲ್ಲಿ ಬಾಲಕಿಯನ್ನು ಅತ್ಯಾಚಾರಗೈದಿದ್ದಾನೆ.
ವಿದ್ಯಾರ್ಥಿಯು ಬಾಲಕಿಗೆ ಪರಿಚಯಸ್ಥನಾಗಿದ್ದಾನೆ, ಹೀಗಾಗಿ ಬಾಲಕಿ ಅವನೊಂದಿಗೆ ಆಟವಾಡಲು ತೆರಳಿದ್ದಾಳೆ. ಘಟನೆ ಕುರಿತು ತಿಳಿಯುತ್ತಿದ್ದಂತೆ ಹುಡುಗಿಯ ಪೋಷಕರು ಆಘಾತಕ್ಕೊಳಗಾಗಿದ್ದಾರೆ ಎಂದು ಗೋಲಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಡಿ.ಪಿ.ತಿವಾರಿ ಮಾಹಿತಿ ನೀಡಿದ್ದಾರೆ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 372(ಅತ್ಯಾಚಾರ) ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೊಕ್ಸೊ)ಯಡಿ ಪ್ರಕರಣ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಂತರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಖಚಿತವಾಗಿದೆ. ಬಾಲಕಿಯ ಆರೋಗ್ಯ ಸಹಜ ಸ್ಥಿತಿಯಲ್ಲಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಬಾಲಕನನ್ನು ಬಂಧಿಸಲಾಗಿದ್ದು, ಬಾಲಪರಾಧಿಗಳ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ವಿದ್ಯಾರ್ಥಿಗೆ ಪೋರ್ನ್ ವಿಡಿಯೋಗಳನ್ನು ನೋಡುವ ಹುಚ್ಚಿತ್ತು. ಈ ಕುರಿತು ಅವನ ಮೊಬೈಲ್‍ನಲ್ಲಿ ಸರ್ಚ್ ಮಾಡಲಾಗಿತ್ತು. ತನ್ನ ಸ್ನೇಹಿತರೊಂದಿಗೆ ಪೋರ್ನ್ ವಿಡಿಯೋಗಳನ್ನು ನೋಡುತ್ತಿದ್ದ. ಆರೋಪಿಯನ್ನು ಪ್ರಶ್ನಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.