ಮೋದಿ ಸರ್ಕಾರವನ್ನು ಟೀಕಿಸಲು ಭಯದ ವಾತಾವರಣ ನಿರ್ಮಾಣವಾಗಿದೆ – ರಾಹುಲ್ ಬಜಾಜ್

Public TV
2 Min Read
RAHUL BAJAJ AND AMIT SHAH

ಮುಂಬೈ: ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಜನರು ಭಯಪಡುತ್ತಿದ್ದಾರೆ ಎಂದು ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಧ್ಯಮವೊಂದರ ಸಂವಾದ ಕಾರ್ಯಕ್ರಮಕ್ಕೆ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೇ ಸಚಿವ ಪಿಯೂಶ್ ಗೋಯಲ್ ಆಗಮಿಸಿದ್ದರು. ಈ ವೇಳೆ ರಾಹುಲ್ ಬಜಾಜ್, ಯುಪಿಎ 2 ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎಲ್ಲರನ್ನೂ ಟೀಕಿಸಬಹುದಾಗಿತ್ತು. ಆದರೆ ಈಗ ಮೋದಿ ಸರ್ಕಾರವನ್ನು ಟೀಕಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ನಿಮ್ಮನ್ನು ಟೀಕಿಸಿದರೆ ನೀವು ಮೆಚ್ಚುಗೆ ವ್ಯಕ್ತಪಡಿಸುತ್ತೀರಿ ಎನ್ನುವ ಯಾವುದೇ ವಿಶ್ವಾಸವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಹುಲ್ ಬಜಾಜ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಯಾರೂ ಯಾವುದೇ ಕಾರಣಕ್ಕೂ ಭಯಪಡಬೇಕಾದ ಅಗತ್ಯವಿಲ್ಲ. ಮಾಧ್ಯಮಗಳಲ್ಲಿ ನಮ್ಮ ಸರ್ಕಾರದ ವಿರುದ್ಧ ನಿರಂತರ ಟೀಕೆಗಳು ಬರುತ್ತಿವೆ. ನೀವು ಹೇಳಿದಂತೆ ಭಯದ ಪರಿಸರ ಸೃಷ್ಟಿಯಾಗಿದ್ದರೆ ನಾವು ಸುಧಾರಿಸಲು ಪ್ರಯತ್ನಿಸುತ್ತೇವೆ. ನಮ್ಮ ಯಾವುದೇ ಟೀಕೆ ಬಂದರೂ ನಮ್ಮ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಮಾತಿನ ಆರಂಭದಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಬಗ್ಗೆ ಪ್ರಸ್ತಾಪ ಮಾಡಿದ ರಾಹುಲ್ ಬಜಾಜ್, ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. ಗಾಂಧೀಜಿಗೆ ಗುಂಡು ಹಾರಿಸಿದವರು ಯಾರು ಎನ್ನುವ ಬಗ್ಗೆ ಸಂಶಯವಿದೆಯೇ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಅಮಿತ್ ಶಾ ಪ್ರತಿಕ್ರಿಯಿಸಿ, ಪ್ರಜ್ಞಾ ಸಿಂಗ್ ಹೇಳಿಕೆಯನ್ನು ಸರ್ಕಾರವಾಗಲಿ ಮತ್ತು ಬಿಜೆಪಿ ಪಕ್ಷವಾಗಲಿ ಯಾರೂ ಒಪ್ಪುವುದಿಲ್ಲ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಹೇಳಿಕೆಯ ಬಳಿಕ ಸಾಧ್ವಿ ಪ್ರಜ್ಞಾ ಸಂಸತ್ತಿನಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಉತ್ತರಿಸಿದರು.

ಗುಂಪು ಹತ್ಯೆ ಜಾಸ್ತಿ ನಡೆಯುತ್ತಿದ್ದು ಕೃತ್ಯ ಎಸಗಿದವರಿಗೆ ಶಿಕ್ಷೆ ಆಗುತ್ತಿಲ್ಲ ಎಂದು ರಾಹುಲ್ ಬಜಾಜ್ ಹೇಳಿದ್ದಕ್ಕೆ ಅಮಿತ್ ಶಾ, ಗುಂಪು ಹತ್ಯೆ ಈ ಹಿಂದೆಯೂ ಸಂಭವಿಸಿದೆ. ಹಾಗೆ ಹೋಲಿಸಿದರೆ ಈಗ ಕಡಿಮೆ ನಡೆಯುತ್ತಿದೆ. ಕೃತ್ಯ ಎಸಗಿದವರಿಗೆ ಶಿಕ್ಷೆ ಆಗುತ್ತಿಲ್ಲ ಎನ್ನುವ ಮಾತನ್ನು ನಾವು ಒಪ್ಪುವುದಿಲ್ಲ. ಗುಂಪು ಹತ್ಯೆಗೆ ಸಂಬಂಧಿಸಿದ ಹಲವು ಪ್ರಕರಣಗಳು ಈಗಾಗಲೇ ಇತ್ಯರ್ಥವಾಗಿದ್ದು ದೋಷಿಗಳಿಗೆ ಶಿಕ್ಷೆಯಾಗಿದೆ. ಆದರೆ ಮಾಧ್ಯಮಗಳಲ್ಲಿ ಇವುಗಳ ಬಗ್ಗೆ ವರದಿಯಾಗಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *