ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಎರಡನೇ ಪತ್ನಿಗೆ ವಿಚ್ಛೇದನ ನೀಡದೆ ಮೂರನೇ ಮದುವೆಯಾಗಲು ಮುಂದಾಗಿದ್ದನು. ಇದೀಗ ಎರಡನೇ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಜೈಪುರ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಪಾನಿಕೋಯಿಲಿ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ 2016ರಲ್ಲಿ ಜೈಪುರ್ ಜಿಲ್ಲೆಯ ಕೋರೆ ಪ್ರದೇಶದ ಮಹಿಳೆಯನ್ನು ಮದುವೆಯಾಗಿದ್ದನು. ನಂತರ ಆರೋಪಿ ತನ್ನ ಮೊದಲ ಪತ್ನಿಗೆ ತಲಾಕ್ ನೀಡಿ, 2017ರಲ್ಲಿ ಜಿಲ್ಲೆಯ ಕಟಿಯಾ ಗ್ರಾಮದ ಇನ್ನೊಬ್ಬ ಮಹಿಳೆಯನ್ನು ವಿವಾಹವಾದನು ಎಂದು ಇನ್ಸ್ ಪೆಕ್ಟರ್ ರಂಜಿತ್ ಕುಮಾರ್ ಮೊಹಂತಿ ತಿಳಿಸಿದ್ದಾರೆ.
ಎರಡನೇ ಮದುವೆಯಾದ ಕೆಲವೇ ತಿಂಗಳುಗಳ ನಂತರ ಆರೋಪಿ ವಿದೇಶಕ್ಕೆ ಹೋದನು. ಈ ವೇಳೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಪತಿ ವಿದೇಶಕ್ಕೆ ಹೋದ ಮೇಲೆ ಪತಿಯ ಮನೆಯವರು ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಕೊನೆಗೆ ಅವರು ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ, ಆಕೆ ಪೋಷಕರ ಮನೆಗೆ ಹೋಗಿದ್ದು, ಅವರೊಟ್ಟಿಗೆ ವಾಸಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನನ್ನ ಪತಿಗೆ ಮನೆಯವರು ಮೂರನೇ ಮದುವೆಗೆ ತಯಾರಿ ಮಾಡಿಕೊಂಡಿದ್ದರು. ನನಗೆ ಈ ಬಗ್ಗೆ ತಿಳಿದು ಮದುವೆ ನಿಲ್ಲಿಸಲು ಹೋಗಿದ್ದೆ. ಆದರೆ ಆತನ ಕುಟುಂಬದವರು ಮತ್ತು ಸಂಬಂಧಿಕರು ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡರು. ಕೊನೆಗೆ ನಾನು ಪೊಲೀಸರಿಗೆ ದೂರು ನೀಡಿದೆ. ಆದರೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಬಳಿಕ ನಾನು ಜೈಪುರ್ ದ ಪೊಲೀಸ್ ಅಧೀಕ್ಷಕರ (ಎಸ್‍ಪಿ) ಕಚೇರಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ.
ಕೊನೆಗೆ ಎಸ್‍ಪಿ ನಿರ್ದೇಶನದ ಮೇರೆಗೆ ಕೋರೆ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ದೂರಿನ ಆಧಾರದ ಮೇಲೆ ಪತಿಯ ಜೊತೆ ಆತನ ಕುಟುಂಬದವರನ್ನು ಬಂಧಿಸಿದ್ದಾರೆ.