ರಾಜೇಶ್ವರಿ ಫಿಲಂಸ್ ಲಾಂಛನದಲ್ಲಿ ಲೋಕೇಶ್ ನಿರ್ಮಾಣ ಮಾಡಿರುವ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಯುವ ಆವೇಗದ ಸಿನಿಮಾ ಬಗ್ಗೆ ಪ್ರೇಕ್ಷಕರೊಂದು ಬೆರಗಿಟ್ಟುಕೊಂಡಿರುತ್ತಾರೆ. ಈ ಸಿನಿಮಾದತ್ತ ಒಲವು ಮೂಡಿಕೊಂಡಿರುವುದೂ ಆ ಕಾರಣಕ್ಕಾಗಿಯೇ. ಆರಂಭದಲ್ಲಿ ಇದೊಂದು ಬರೀ ಯುವ ಹುಮ್ಮಸ್ಸಿನ ಕಥನ ಅಂದುಕೊಂಡಿದ್ದವರಿಗೆ ಟ್ರೇಲರ್ ನಲ್ಲಿ ಘನ ಗಂಭೀರವಾದ ವಿಚಾರಗಳೇ ಕಾಣಿಸಿವೆ. ಈ ಸಿನಿಮಾದೊಳಗೆ ಗಹನವಾದೊಂದು ಕಥೆ ಇದೆ ಎಂಬ ವಿಚಾರವನ್ನು ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಎಲ್ಲರಿಗೂ ತಲುಪಿಸಿದೆ.
19 ಏಜ್ ಈಸ್ ನಾನ್ಸೆನ್ಸ್ ಎಂಬ ಈ ಸಿನಿಮಾ ತನ್ನ ಶೀರ್ಷಿಕೆಯ ಕಾರಣದಿಂದಲೇ ಆರಂಭಿಕವಾಗಿ ಗಮನ ಸೆಳೆದಿತ್ತು. ಆದರೆ ಅದರ ಬಗ್ಗೆ ಪ್ರೇಕ್ಷಕರೆಲ್ಲ ಚರ್ಚೆ ನಡೆಸಲಾರಂಭಿಸಿದ್ದು ಟ್ರೇಲರ್ ಹೊರ ಬಂದ ನಂತರವೇ. ಯಾಕೆಂದರೆ ಅದರಲ್ಲಿ ಬೇರೆಯದ್ದೇ ಹಾದಿಯಲ್ಲಿರುವಂತೆ ಭಾಸವಾಗುವ ಗಟ್ಟಿ ಕಥೆಯ ಹೊಳಹೊಂದು ಸಿಕ್ಕಿತ್ತು.
ಹತ್ತೊಂಬತ್ತರ ಹರೆಯದ ನಿರ್ಧಾರಗಳ ಆಚೀಚೆಗೆ ಸಮಾಜಕ್ಕೆ ಸಂದೇಶ ನೀಡುವಂಥಾ, ನಮಗೆಲ್ಲ ಮುಖ್ಯವೆನಿಸದಿದ್ದರೂ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವಂಥಾ ಒಂದಷ್ಟು ವಿಚಾರಗಳು ಈ ಮೂಲಕ ಹರಡಿಕೊಂಡಿತ್ತು. ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆದಿದ್ದ ಈ ಸಿನಿಮಾವನ್ನು ಸುರೇಶ್ ಎಂ ಗಿಣಿ ನಿರ್ದೇಶನ ಮಾಡಿದ್ದಾರೆ. ಇಲ್ಲಿ ಮನುಷ್ ನಾಯಕನಾಗಿ ನಟಿಸಿದ್ದಾರೆ.
ಹತ್ತೊಂಬತ್ತರ ಹರೆಯದ ಕಥೆ ಎಂದಾಕ್ಷಣ ಇದು ಯುವ ಸಮುದಾಯಕ್ಕೆ ಸೀಮಿತವಾದ ಕಥೆ ಅನ್ನಿಸೋದು ಸಹಜವೇ. ಇಲ್ಲಿರುವುದೂ ಕೂಡಾ ಯೂಥ್‍ಫುಲ್ ಕಥೆಯಾಗಿದ್ದರೂ ಸಹ ಅದು ಕೌಟುಂಬಿಕ ಸನ್ನಿವೇಶಗಳನ್ನು ಬಳಸಿಕೊಂಡೇ ಸಾಗುತ್ತದೆ. ಚಿತ್ರರಂಗ ಹೇಳಿಕೊಂಡಿರೋ ಪ್ರಕಾರ ನೋಡೋದಾದರೆ ಇಲ್ಲಿ ಫ್ಯಾಮಿಲಿ ಕಥನವೇ ಪ್ರಧಾನ ಪಾತ್ರ ವಹಿಸುತ್ತದೆಯಂತೆ.
ಇದು ಯುವ ಸಮುದಾಯದೊಂದಿಗೆ ಪೋಷಕರಿಗೂ ಒಂದು ಸಂದೇಶವನ್ನು ಹೊತ್ತು ತಂದಿದೆ. ಇದರೊಂದಿಗೆ ಲವ್, ಮಾಸ್ ಕಥನವನ್ನೂ ಒಳಗೊಂಡಿರುವ 19 ಏಜ್ ಈಸ್ ನಾನ್ಸೆನ್ಸ್ ಕಮರ್ಶಿಯಲ್ ಸೂತ್ರದೊಂದಿಗೆ ತಯಾರಾಗಿರುವ ಚಿತ್ರ.