30 ಸೆಕೆಂಡ್‍ನಲ್ಲಿ ಉರುಳಿತು 108 ಮೀ. ಎತ್ತರದ ಕಟ್ಟಡ – ವಿಡಿಯೋ

Public TV
1 Min Read
johannesburg

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ 22 ಅಂತಸ್ತಿನ ಕಟ್ಟಡವನ್ನು ಕೇವಲ 30 ಸೆಕೆಂಡ್‍ನಲ್ಲಿ ನೆಲಸಮ ಮಾಡಲಾಗಿದೆ.

ಕಳೆದ ಸೆಪ್ಟೆಂಬರ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದ ನಂತರ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ನ ಬ್ಯಾಂಕ್ ಆಫ್ ಲಿಸ್ಬನ್ ಕಟ್ಟಡವನ್ನು ಭಾನುವಾರ ನೆಲಸಮ ಮಾಡಲಾಯಿತು.

ಭಾನುವಾರ ಬೆಳಗ್ಗೆ ಕೇವಲ 30 ಸೆಕೆಂಡ್‍ಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಕಟ್ಟಡವನ್ನು ಸ್ಫೋಟಕಗಳನ್ನು ಬಳಸಿ ನೆಲಸಮ ಮಾಡಲಾಗಿದೆ. ನೆಲಸಮ ಮಾಡಿದ ಕಟ್ಟಡಗಳ ಪೈಕಿ ಇದು ವಿಶ್ವದಲ್ಲೇ ಎರಡನೇ ಅತ್ಯಂತ ದೊಡ್ಡ ಕಟ್ಟಡವಾಗಿದೆ ಎಂದು ವರದಿಯಾಗಿದೆ.

ಇದರ ಎತ್ತರ 108 ಮೀಟರ್ ಆಗಿದ್ದು, ಈ ಹಿಂದೆ 114 ಮೀಟರ್ ಎತ್ತರದ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು. ಇದೇ ವಿಶ್ವದಲ್ಲಿ ಅತ್ಯಂತ ಹೆಚ್ಚು ಎತ್ತರದ ನೆಲಸಮಗೊಂಡ ಕಟ್ಟಡವಾಗಿದೆ ಎಂದು ಗೌಟೆಂಗ್‍ನ ಮೂಲ ಸೌಲಭ್ಯ ಮತ್ತು ಆಸ್ತಿ ಅಭಿವೃದ್ಧಿ ಮಂಡಳಿ ಸದಸ್ಯೆ ತಸ್ನೀಮ್ ಮೊತರಾ ಮಾಹಿತಿ ನೀಡಿದ್ದಾರೆ. ಇದನ್ನು ಉರುಳಿಸುವುದು ಅತ್ಯಂತ ಕಷ್ಟಕರ ಕೆಲಸವಾಗಿತ್ತು. ಆದರೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಫೋಟದ ಮೊದಲು, ಹತ್ತಿರದ ಕಟ್ಟಡಗಳಲ್ಲಿ ವಾಸವಿದ್ದ ಸುಮಾರು 2 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿತ್ತು. ಕಟ್ಟಡ ಕೆಡವಿದ ನಂತರ ವ್ಯಾಪಕ ಧೂಳು ತುಂಬಿತ್ತು. ಯಾವ ಪ್ರಮಾಣದಲ್ಲಿ ಧೂಳಿತ್ತು ಎಂಬುದನ್ನು ವಿಡಿಯೋ ಮೂಲಕ ನೋಡಬಹುದಾಗಿದೆ.

ಬ್ಯಾಂಕ್ ಆಫ್ ಲಿಸ್ಬನ್ ಬದಲಿಗೆ ಇನ್ನೊಂದು ಕಟ್ಟಡವನ್ನು ನಿರ್ಮಿಸಲಾಗುವುದು. ಈ ಕಟ್ಟಡದಲ್ಲಿ ಸರ್ಕಾರಿ ಇಲಾಖೆಗಳ ಕಚೇರಿಗಳನ್ನೂ ಸ್ಥಾಪಿಸಲಾಗುವುದು ಎಂದು ತಸ್ನೀಮ್ ಮಾಹಿತಿ ನೀಡಿದರು.

ಬೆಂಕಿ ಹೊತ್ತಿಕೊಂಡ ನಂತರ ಅಲ್ಲಿನ ಗೌಟೆಂಗ್ ಪ್ರಾಂತೀಯ ಸರ್ಕಾರ ಕಟ್ಟಡದ ರಚನಾತ್ಮಕ ಮೌಲ್ಯಮಾಪನವನ್ನು ನಡೆಸಿತು. ಕಟ್ಟಡ ಉತ್ತಮ ಸ್ಥಿತಿಯಲ್ಲಿ ಇಲ್ಲದೇ ಇರುವುದು ಮತ್ತು ಸುರಕ್ಷತಾ ಮಾನದಂಡ ಪಾಲನೆಯಲ್ಲಿ ವಿಫಲಗೊಂಡಿತ್ತು. ಈ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದ ವೇಳೆ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೂವರು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಎಲ್ಲ ಕಾರಣಗಳಿಂದಾಗಿ ಸರ್ಕಾರ ಈ ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *