ಕಾರವಾರ: ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಈ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಬಳಿ ಬೂಟಿನ ಹೊಡೆತ ತಿಂದು ಬಿಜೆಪಿಯಿಂದ ಹೊರ ಬಂದಿದ್ದರು. ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ ಎಂದು ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ್ ವಾಗ್ದಾಳಿ ನಡೆಸಿದ್ದಾರೆ.
ಯಲ್ಲಾಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಹೆಬ್ಬಾರ್ ಈ ಹಿಂದೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ವೇಳೆ ಅನಂತಕುಮಾರ್ ಹಗ್ಡೆ ಬಳಿ ಬೂಟಿನಿಂದ ಹೊಡೆತ ತಿಂದು ಬಿಜೆಪಿ ಬಿಟ್ಟು ಹೊರಬಂದು, ನಂತರ ಕಾಂಗ್ರೆಸ್ ಸೇರಿದ್ದರು. ಈಗ ಮತ್ತೆ ಬಿಜೆಪಿಗೆ ಸೇರಿದ್ದಾರೆ, ಅವರಿಗೆ ನಾಚಿಗೆಯಾಗಬೇಕು. ಅವರ ಬಂಡವಾಳ ಹೊರಹಾಕಿದರೆ ಬೆಟ್ಟದಷ್ಟಿದೆ ಎಂದು ಕಿಡಿಕಾರಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಅವರನ್ನು ಬಿಜೆಪಿಯಿಂದ ಕಾಂಗ್ರೆಸ್‍ಗೆ ಕರೆತಂದ ದೇಶಪಾಂಡೆಗೆ ಹೆಬ್ಬಾರ್ ಚೂರಿ ಹಾಕಿದ್ದಾರೆ. ಹಾಗೆಯೇ ಮತ ನೀಡಿದವರಿಗೂ ಚೂರಿ ಹಾಕಿದ್ದಾರೆ ಇವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
ಆಪರೇಷನ್ ಕಮಲದ ಪಿತಾಮಹ ಮಿಸ್ಟರ್ ಯಡಿಯೂರಪ್ಪ, ಅನರ್ಹ ಶಾಸಕರಿಗೆ 20 ಕೋಟಿ ರೂ. ಕೊಡಲಾಗಿದೆ. ಲಂಚದ ಹಣ ತಂದು ಶಾಸಕರಿಗೆ ಕೊಟ್ಟು ಸಮ್ಮಿಶ್ರ ಸರ್ಕಾರ ಕೆಡವಿ ಹಾಕಿದ್ದರು. ಅಲ್ಲದೆ ಮಹಾರಾಷ್ಟ್ರದಲ್ಲಿ ಕಳ್ಳರ ರೀತಿ ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆ ಕೊನೆ ಮಾಡಿ ಅಧಿಕಾರಕ್ಕೆ ಬರುತ್ತಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಯಲ್ಲಾಪುರ ವಿಧಾನಸಭೆ ಕ್ಷೇತ್ರದ ಹಲವೆಡೆ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ,ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ಪರ ಮತ ಯಾಚಿಸಿದೆ.
ಸ್ವಾರ್ಥ ಸಾಧನೆಗಾಗಿ ಜನಾಭಿಪ್ರಾಯವನ್ನು ಲೆಕ್ಕಿಸದೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಅನರ್ಹರಿಗೆ ಮತ ನೀಡದೆ, ನಮ್ಮ ಪಕ್ಷದ ಅರ್ಹ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡುತ್ತೇನೆ pic.twitter.com/EB1krcnhm2
— Siddaramaiah (@siddaramaiah) November 25, 2019
ಅನಂತಕುಮಾರ್ ಹೆಗಡೆ ಗ್ರಾಮಪಂಚಾಯತ್ ಸದಸ್ಯನಾಗುಲು ಸಹ ನಾಲಾಯಕ್, ಸಂವಿಧಾನವೇ ಅವನಿಗೆ ಗೊತ್ತಿಲ್ಲ. ಅನಂತಕುಮಾರ್ ಏನು ಮಾತನಾಡುತ್ತಾರೆ ಎನ್ನುವುದು ಅವರಿಗೇ ಗೊತ್ತಿರುವುದಿಲ್ಲ. ಸಂವಿಧಾನ ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ. ನಾನು ಪ್ರಧಾನಿಯಾಗಿದ್ದರೆ ಅಂದು ಸಚಿವ ಸ್ಥಾನದಿಂದ ಅವರನ್ನು ಕಿತ್ತು ಹಾಕುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಬಿಜೆಪಿ ಸೇರುತ್ತೇನೆ ಎನ್ನುತ್ತಾರೆ. ನನ್ನ ಹೋರಾಟವೇ ಕೋಮುವಾದಿ, ಜಾತಿವಾದಿಗಳ ವಿರುದ್ಧ ಹೀಗಿರುವಾಗ ಬಿಜೆಪಿಗೆ ಸೇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಚುನಾವಣೆ ನಂತರ ಯಡಿಯೂರಪ್ಪ ಸರ್ಕಾರ ಹೋಗಲಿದ್ದು, ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ. ಮಧ್ಯಂತರ ಚುನಾವಣೆ ಬರುತ್ತದೆ ನಾವೇ ಆಡಳಿತ ನಡೆಸುತ್ತೇವೆ, ಏಳು ಕೆ.ಜಿ. ಅಕ್ಕಿ ಬದಲು ಹತ್ತು ಕೆ.ಜಿ. ಅಕ್ಕಿಯನ್ನು ಬಡವರಿಗೆ ನೀಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಯಡಿಯೂರಪ್ಪನವರ ಅನೈತಿಕ ಸರ್ಕಾರ ಉಪಚುನಾವಣೆಯ ಫಲಿತಾಂಶದ ನಂತರ ಪತನವಾಗಿ, ಮಧ್ಯಂತರ ಚುನಾವಣೆ ನಡೆದರೆ ನೂರಕ್ಕೆ ನೂರು ನಮ್ಮ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯ ರೆಸಾರ್ಟ್ ರಾಜಕಾರಣ, ಕುದುರೆ ವ್ಯಾಪಾರ ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ. 2/2 #PressMeet #Hubli
— Siddaramaiah (@siddaramaiah) November 25, 2019
ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ವಿರುದ್ಧ ಕಾಂಗ್ರೆಸ್ ನಾಯಕರು ಮಾತಿನ ಚಾಟಿ ಬೀಸುತಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ರನ್ನು ಗೆಲ್ಲಿಸಲು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಶತ ಪ್ರಯತ್ನ ನಡೆಸುತ್ತಿದ್ದಾರೆ.