ಗಿಡಗಂಟಿಗಳಿಂದ ಕೂಡಿದ್ದ ಶಾಲೆಯಾಯ್ತು ನಂದನವನ- ಲಿಂಗಸಗೂರು ಶಿಕ್ಷಕ ಹುಲ್ಲಪ್ಪ ಪಬ್ಲಿಕ್ ಹೀರೋ

Public TV
1 Min Read
RCR

ರಾಯಚೂರು: ಅಪಘಾತದಿಂದ ಕಾಲು ಕಳೆದುಕೊಂಡರೂ ಅಚಲರಾಗದೆ ಶಾಲೆಯ ಅಭಿವೃದ್ಧಿಗೆ ತೊಟ್ಟಿದ್ದ ಶಪಥವನ್ನು ರಾಯಚೂರಿನ ಲಿಂಗಸಗೂರಿನ ಪಬ್ಲಿಕ್ ಹೀರೋ ಪೂರೈಸಿದ್ದಾರೆ .

ಹೌದು. ರಾಯಚೂರಿನ ಲಿಂಗಸಗೂರಿನ ಈಚನಾಳ ತಾಂಡದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಪೂರಕವಾಗಿರೋ ಮುದ ನೀಡೋ ವಾತಾವರಣಕ್ಕೆ ಶಿಕ್ಷಕ ಹುಲ್ಲಪ್ಪ ಎಸ್ ವನಕಿಹಾಳ ಅವರೇ ಕಾರಣ. ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡರೂ ಛಲ ಬಿಡದೇ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. 2007ರಲ್ಲಿ ಈಚನಾಳ ತಾಂಡಕ್ಕೆ ಶಿಕ್ಷಕರಾಗಿ ಬಂದ ಹುಲ್ಲಪ್ಪ, ಇಲ್ಲಿನ ಗಿಡಗಂಟಿಗಳೇ ತುಂಬಿದ್ದ ವಾತಾವರಣ ನೋಡಿ ಗಾಬರಿಯಾಗಿದ್ದರು. ನಂತರ ಹಂತಹಂತವಾಗಿ ನಂದನವನ ಮಾಡಿದ್ದಾರೆ.

RCR 1

ವಿವಿಧ ಬಗೆಯ ಸುಮಾರು 300 ಗಿಡಗಳನ್ನ ನೆಟ್ಟು ಪರಿಸರ ಶಾಲೆಯನ್ನಾಗಿ ನಿರ್ಮಿಸಿದ್ದಾರೆ. ಹೂವು, ಹಣ್ಣು, ಔಷಧಿ, ತರಕಾರಿ ಸಸ್ಯಗಳನ್ನೂ ಬೆಳೆಸಿದ್ದಾರೆ. ನೀರಿಗಾಗಿ 2 ಬೋರ್‍ವೆಲ್ ಕೊರೆಸಿದ್ದಾರೆ. ಶಾಲೆಯ ಆವರಣ ಈಗ ಉದ್ಯಾನವನದಂತೆ ಆಗಿರುವುದರಿಂದ ಚಿಟ್ಟೆಗಳು, ಪಕ್ಷಿಗಳು ಬರುತ್ತಲೇ ಇರುತ್ತವೆ. ಜೊತೆಗೆ ಶಾಲೆಗೆ ಸತತವಾಗಿ ಪರಿಸರ ಶಾಲೆ ಪ್ರಶಸ್ತಿಯೂ ಬರ್ತಿದೆ.

10 ವರ್ಷಕಾಲ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿರೋ ಹುಲ್ಲಪ್ಪ ಅವರು, ಮಕ್ಕಳಿಗಾಗಿ ಕಂಪ್ಯೂಟರ್, ಬಿಸಿಯೂಟಕ್ಕೆ ಬೆಂಚ್, ಶೌಚಾಲಯ ಸೇರಿದಂತೆ ಪ್ರತಿಯೊಂದಕ್ಕೂ ಏಕಾಂಗಿಯಾಗಿ ಓಡಾಡಿ ಸೌಲಭ್ಯಗಳನ್ನ ಒದಗಿಸಿದ್ದಾರೆ. ಕೇವಲ 45 ಇದ್ದ ವಿದ್ಯಾರ್ಥಿಗಳ ಸಂಖ್ಯೆ 140ಕ್ಕೆ ಏರಿದೆ. ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದೆ.

ಅಂಗವೈಕಲ್ಯ ಮೆಟ್ಟಿ ನಿಂತು ಸುಂದರ ಶಾಲೆಯನ್ನ ಹುಲ್ಲಪ್ಪ ಕಟ್ಟಿದ್ದು, ಇದಕ್ಕೆ ಗ್ರಾಮಸ್ಥರೂ ಸಾಥ್ ನೀಡಿದ್ದಾರೆ. ಅಂದಹಾಗೆ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಹುಲ್ಲಪ್ಪ, ಪ್ರಶಸ್ತಿಯ ಸಹಾಯಧನ 50 ಸಾವಿರ ರೂಪಾಯಿಗಳನ್ನೂ ಶಾಲೆಗಾಗಿಯೇ ವಿನಿಯೋಗಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *