ಯಾದಗಿರಿ: ಗೂಡ್ಸ್ ರೈಲೊಂದು ಹಳಿ ಬಿಟ್ಟು ಪ್ಲಾಟ್‍ಫಾರ್ಮ್ ಮೇಲೆ ಬಂದ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲು ಗುದ್ದಿದ ರಭಸಕ್ಕೆ ನಿಲ್ದಾಣದ ಕಾಂಪೌಂಡ್ ಛಿದ್ರ ಛಿದ್ರವಾಗಿದ್ದು, ಅಂಗಡಿ ಹಾಗೂ ಬುಕ್ ಸ್ಟಾಲ್‍ಗೆ ಹಾನಿಯಾಗಿದೆ.
ರೈಲಿನಿಂದ ಗೂಡ್ಸ್ ಖಾಲಿ ಮಾಡುವಾಗ ಈ ಘಟನೆ ನಡೆದಿದೆ. ಲೊಕೋ ಪೈಲಟ್ ರೈಲನ್ನು ರಿವರ್ಸ್ ತರುತ್ತಿದ್ದಾಗ ರೈಲು ಹಳಿ ದಾಟಿ ಪ್ಲಾಟ್‍ಫಾರ್ಮ್ ಮೇಲೆ ಬಂದಿದೆ. ಹಿಂಬದಿಯಿಂದ ನಿಲ್ದಾಣದ ಕಾಂಪೌಂಡ್‍ಗೆ ಡಿಕ್ಕಿ ಹೊಡೆದು, ಬಳಿಕ ಪ್ಲಾಟ್‍ಫಾರ್ಮ್ ಮೇಲಿದ್ದ ಬುಕ್ ಸ್ಟಾಲ್‍ಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಕಾಂಪೌಂಡ್ ಒಡೆದು ಬಿದ್ದಿದ್ದು, ಇದ್ದ ಸ್ಥಳದಿಂದ ಸುಮಾರು 10 ಅಡಿ ದೂರಕ್ಕೆ ಬುಕ್ ಸ್ಟಾಲ್ ಅನ್ನು ರೈಲು ತಳ್ಳಿದೆ.
ಅದೃಷ್ಟವಶಾತ್ ಘಟನೆ ವೇಳೆ ಅಂಗಡಿಯಲ್ಲಿ ಯಾರು ಇರಲಿಲ್ಲ. ಹಾಗೂ ಪ್ರಯಾಣಿಕರು ಕೂಡ ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಸಿಗ್ನಲ್ ಹಾಗೂ ಸ್ಟಾಪ್ ಪಾಯಿಂಟ್ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.