ಮೈಸೂರು: ಎಲ್ಲರಿಗೂ ನಾನು ಅಂದ್ರೆ ಭಯ ಇರಬೇಕು. ಅದಕ್ಕಾಗಿ ಎಲ್ಲರೂ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಅವರ ಟಾರ್ಗೆಟ್ ನಾನೇ. ಅನರ್ಹರ ಟಾರ್ಗೆಟ್ ಸಹ ನಾನೇ. ಇದನ್ನು ನೋಡಿದರೆ ಅವರಿಗೆಲ್ಲ ನನ್ನ ಮೇಲೆ ಭಯ ಇರಬೇಕು. ಅವರೆಲ್ಲ ಹತಾಶರಾಗಿದ್ದಾರೆ. ಅದಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಹೇಳಿದರು.
ನಾನು ಕಾಂಗ್ರೆಸ್ಸಿನಲ್ಲಿ ಏಕಾಂಗಿಯಲ್ಲ. ಕಾಂಗ್ರೆಸ್ ಪಕ್ಷ ಯಾವತ್ತೂ ಯಾರನ್ನೂ ಏಕಾಂಗಿ ಮಾಡಲ್ಲ. ಯಡಿಯೂರಪ್ಪರಿಗೆ ನಾನು ಏಕಾಂಗಿ ಆಗಬೇಕು ಅನಿಸಿರಬಹುದು. ಆದರೆ ಅವರ ಆಸೆ ಈಡೇರುವುದಿಲ್ಲ ಎಂದು ತಿಳಿಸಿದರು.
ಶ್ರೀರಾಮುಲು ಸವಾಲು ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಸಚಿವ ಶ್ರೀರಾಮುಲು ವೆರಿ ವೆರಿ ಪಾಪ್ಯುಲರ್ ಲೀಡರ್. ನಾನು ಅಷ್ಟು ಪಾಪ್ಯುಲರ್ ಅಲ್ಲ. ಅವರು ಯಾರ ಮೇಲಾದರೂ ತೊಡೆ ತಟ್ಟುತ್ತಾರೆ. ಆದರೆ ನಮಗೆ ಆ ರೀತಿ ತಟ್ಟಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಸಚಿವ ಮಾಧುಸ್ವಾಮಿ ಅವರು ಕುರುಬ ಸಮುದಾಯದ ವಿರುದ್ಧ ನೀಡಿದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲರಿಗೂ ಒಂದು ಸಂಸ್ಕೃತಿ ಇರಬೇಕು. ಬಿಜೆಪಿಯ ಯಾವ ನಾಯಕರಿಗೂ ಒಳ್ಳೆಯ ಸಂಸ್ಕೃತಿ ಇಲ್ಲ. ಅವರದ್ದು ಪ್ಯಾಸಿಸಿಸ್ಟ್ ಪಕ್ಷ. ನೈಜ ಮಾತುಗಳನ್ನು ಆಡಲ್ಲ. ಸತ್ಯವನ್ನು ಸುಳ್ಳು ಮಾಡೋಡು ಸುಳ್ಳನ್ನು ಸತ್ಯ ಮಾಡೋದು ಅವರ ಕೆಲಸವಾಗಿದೆ. ಇದು ಹಿಟ್ಲರ್ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು.
ಉಪಚುನಾವಣೆಯಲ್ಲಿ ಸೋಲುವ ಕಡೆ ಕಾಂಗ್ರೆಸ್ಸಿಗೆ ಬೆಂಬಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಸಂಬಂಧ ಮಾತನಾಡಿ, ನಮ್ಮ ಉದ್ದೇಶ ಅನರ್ಹರು ಸೋಲಬೇಕು. ಸಮ್ಮಿಶ್ರ ಸರ್ಕಾರ ಬೀಳಲು ಇವರೇ ಕಾರಣ. ಅದಕ್ಕಾಗಿ ಅವರು ಸೋಲಬೇಕು. ಈ ಮೂಲಕ ರಾಜ್ಯಾದ್ಯಂತ ಒಂದು ಸಂದೇಶ ರವಾನೆಯಾಗಬೇಕು. ಪಕ್ಷಾಂತರಿಗಳ ವಿರೋಧಿ ಸಂದೇಶ ರವಾನೆಯಾಗಬೇಕು. ಈ ವಿಚಾರವಾಗಿ ಕಾಂಗ್ರೆಸ್-ಜೆಡಿಎಸ್ ಇಬ್ಬರ ಉದ್ದೇಶವೂ ಒಂದೇ ಆಗಿದೆ. ಆದರೆ ಅವರ ದಾರಿ ಮತ್ತು ನಮ್ಮ ದಾರಿ ಒಂದೇ ಅಲ್ಲ ಎಂದು ಹೇಳಿದ್ದಾರೆ.



