ಸುಳ್ವಾಡಿ ಮಾರಮ್ಮ ದೇಗುಲ ತೆರೆಯುವಂತೆ ಭಕ್ತರ ಕಣ್ಣೀರು

Public TV
1 Min Read
CNG copy

ಚಾಮರಾಜನಗರ: ವಿಷ ಪ್ರಸಾದ ಸೇವನೆಯಿಂದ 17 ಮಂದಿ ಸಾವನ್ನಪ್ಪಿ 120ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು ಸಹ ಭಕ್ತರಿಗೆ ಆ ದೇವಿಯ ಮೇಲಿನ ಭಕ್ತಿ ಒಂದಿನಿತು ಕಡಿಮೆಯಾಗಿಲ್ಲ. ಈ ದುರಂತದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಚ್ಚಿ ಒಂದು ವರ್ಷ ಕಳೆಯುತ್ತಾ ಬಂದಿದೆ. ದೇವಿಯ ದರ್ಶನ ಸಿಗದೇ ಭಕ್ತರು ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ. ದೇವಸ್ಥಾನ ಮುಚ್ಚಿರುವುದರಿಂದ ಮಾರಮ್ಮ ಮುನಿಸಿಕೊಂಡಿದ್ದಾಳೆ ಎಂಬುದು ಅಲ್ಲಿನ ಜನರ ನಂಬಿಕೆ. ಹೀಗಾಗಿಯೇ ಹಲವಾರು ರೀತಿಯ ರೋಗ ರುಜಿನಗಳು, ಸಂಕಷ್ಟಗಳು ಬರುತ್ತಿವೆ ಎಂದು ಭಕ್ತರು ನಂಬಿದ್ದಾರೆ.

CNG 2

ಹೌದು. ಜಿಲ್ಲೆಯ ಹನೂರು ತಾಲೋಕಿನ ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯುವ ಹುನ್ನಾರಕ್ಕೆ 17 ಮಂದಿ ಬಲಿಯಾಗಿದ್ದರು. ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಹಾಗು ಇತರ ಮೂವರು ಸೇರಿ ಪ್ರಸಾದದಲ್ಲಿ ವಿಷಬೆರೆಸಿ ದೊಡ್ಡ ದುರಂತಕ್ಕೆ ಕಾರಣವಾಗಿ ಕಂಬಿ ಎಣಿಸುತ್ತಿದ್ದಾರೆ.

ಈ ದುರಂತದ ಹಿನ್ನೆಲೆಯಲ್ಲಿ ಕಿಚ್ ಗುತ್ ಮಾರಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವರ್ಗಾಯಿಸಿ ಬೀಗ ಜಡಿಯಲಾಗಿದೆ. ಹೀಗಾಗಿ ಪೂಜೆಯು ನಿಂತು ಹೋಗಿದೆ. ದೇವಸ್ಥಾನ ಮುಚ್ಚಿರುವುದರಿಂದ ಮಾರಮ್ಮ ದೇವಿ ಮುನಿಸಿಕೊಂಡಿದ್ದಾಳೆ. ಹಾಗಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಜನರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ತಾಯಿ ಮಾರಮ್ಮನ ಬಾಗಿಲು ಮುಚ್ಚಿದ ನಂತ್ರ ಸಂಕಷ್ಟಗಳು ಎದುರಾಗಿದ್ದು ಇದೆಲ್ಲ ದೂರಾಗಬೇಕು ಅಂದರೆ ದೇವಾಸ್ಥಾನದ ಬಾಗಿಲು ತೆರೆಯುವಂತೆ ಅಳಲು ತೋಡಿಕೊಂಡರು.

CNG 3 copy

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಿಕ್ಷಣ ಸಚಿವ ಇಂದು ಸುಳ್ವಾಡಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಭಕ್ತರ ಕಣ್ಣಿರ ಕಟ್ಟೆ ಒಡೆಯಿತು. ದೇವಸ್ಥಾನವನ್ನು ಕೂಡಲೇ ತೆರೆಯುವಂತೆ ಭಕ್ತರು ಗೋಳಿಟ್ಟ ಪ್ರಸಂಗ ನಡೆಯಿತು. ಈ ವೇಳೆ ಸಚಿವರು, ಕಿಚ್ ಗುತ್ ಮಾರಮ್ಮ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಅನುಮತಿ ಪಡೆದು ಆದಷ್ಟು ಬೇಗ ಅರ್ಚಕರನ್ನು ನೇಮಿಸಿ ದೇವಸ್ಥಾನ ತೆರೆಯುವುದಾಗಿ ಭರವಸೆ ನೀಡಿದರು.

ಇದಕ್ಕೂ ಮೊದಲು ಸಚಿವ ಸುರೇಶ್ ಕುಮಾರ್ ವಿಷ ದುರಂತದ ಸಂತ್ರಸ್ತರನ್ನು ಭೇಟಿಯಾಗಿದ್ದು, ಹಿಂದಿನ ಸರ್ಕಾರ ನೀಡಿದ್ದ ಭರವಸೆಯಂತೆ ಮೃತಪಟ್ಟವರ ಕುಟುಂಬಗಳಿಗೆ ಜಮೀನು ಮಂಜೂರು ಮಾಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

CNG 1

Share This Article
Leave a Comment

Leave a Reply

Your email address will not be published. Required fields are marked *