ಸರ್ಕಾರ ರಚಿಸುವ ಜವಾಬ್ದಾರಿ ಇದ್ದವರು ಓಡಿ ಹೋದರು – ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ

Public TV
2 Min Read
Sanjay Raut

ನವದೆಹಲಿ: ಸರ್ಕಾರ ರಚಿಸಲಾಗದೆ ಕಂಗೆಟ್ಟಿರುವ ಶಿವಸೇನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಪ್ರಾರಂಭಿಸಿದೆ.

ನ್ಯಾಷನಲ್ ಕಾಂಗ್ರೆಸ್ ಪಕ್ಷ(ಎನ್‍ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಚರ್ಚಿಸಿದರು. ನಂತರ ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ಪವಾರ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸುವ ಸಾಧ್ಯಾಸಾಧ್ಯತೆ ಕುರಿತು ಚರ್ಚಿಸಿದರು.

ಪವಾರ್ ಭೇಟಿ ನಂತರ ಸಂಜಯ್ ರಾವತ್ ಪ್ರತಿಕ್ರಿಯಿಸಿ, ಸರ್ಕಾರ ರಚಿಸುವ ಜವಾಬ್ದಾರಿ ನಮ್ಮದಲ್ಲ. ಆ ಜವಾಬ್ದಾರಿಯನ್ನು ಹೊಂದಿದವರು ಓಡಿಹೋದರು. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿಗಳ ಆಡಳಿತ ಬಂದಿರುವುದು ನಮ್ಮಿಂದಲ್ಲ ಎಂದು ಬಿಜೆಪಿ ಹೆಸರನ್ನು ಉಲ್ಲೇಖಿಸದೆ ಕಿಡಿ ಕಾರಿದರು.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಕುರಿತು ಭರವಸೆ ವ್ಯಕ್ತಪಡಿಸಿದ ಅವರು, ಶೀಘ್ರದಲ್ಲೇ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Sharad Pawar Sonia Gandhi 1

ಶದರ್ ಪವಾರ್ ಸಭೆ ಕುರಿತು ಸಂಜಯ್ ರಾವತ್ ಮಾತನಾಡಿ, ಶರದ್ ಪವಾರ್ ಅವರ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗ ರಚಿಸಿ ಮುನ್ನಡೆಸುವ ಸಾಧ್ಯತೆ ಬಗ್ಗೆ ಚರ್ಚಿಸಲಾಗಿದೆ. ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ ಅಪಾರ ಹಾನಿ ಸಂಭವಿಸಿದೆ. ವಿಪರೀತ ಬೆಳೆ ಹಾನಿಯಾಗಿದೆ. ಈ ಕುರಿತು ಚರ್ಚಿಸಲು ಸರ್ವ ಪಕ್ಷಗಳ ನಿಯೋಗ ರಚಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.

ಸೋನಿಯಾ ಗಾಂಧಿ ಭೇಟಿ ನಂತರ ಶರದ್ ಪವಾರ್ ಪ್ರತಿಕ್ರಿಯಿಸಿ, ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿ ಕುರಿತು ಮಾತ್ರ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಿದ್ದೇನೆ. ಉಭಯ ನಾಯಕರು ಸೇರಿ ಇತರ ನಾಯಕರು ಹಾಗೂ ಮಿತ್ರರೊಂದಿಗೆ ಮಾತುಕತೆ ನಡೆಸಲಿದ್ದೇವೆ. ನಂತರ ರಾಜ್ಯದಲ್ಲಿ ಸರ್ಕಾರ ರಚಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಲ್ಲದೆ ಸರ್ಕಾರ ರಚನೆ ಕುರಿತು ಚರ್ಚೆ ನಡೆದಿಲ್ಲ. ಕೇವಲ ಕಾಂಗ್ರೆಸ್ ಹಾಗೂ ಎನ್‍ಸಿಪಿ ಕುರಿತು ಮಾತ್ರ ಚರ್ಚೆ ನಡೆದಿದೆ ಎಂದರು.

SHARAD PAWAR

170 ಶಾಸಕ ಬೆಂಬಲ ಇದೆ ಎಂದು ಶಿವಸೇನೆ ಹೇಳಿದೆ ಎಂಬುದರ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ 170 ಶಾಸಕರು ನನಗೆ ತಿಳಿದಿಲ್ಲ. ಈ ಕುರಿತು ನೀವು ಅವರನ್ನೇ ಕೇಳಬೇಕು ಎಂದು ಉತ್ತರಿಸಿದರು.

ಇದಕ್ಕೆ ಸಂಜಯ್ ರಾವತ್ ಪ್ರತಿಕ್ರಿಯಿಸಿ, ಪವಾರ್ ಅವರು ಸೋನಿಯಾ ಗಾಂಧಿ ಅವರೊಂದಿಗೆ ಸರ್ಕಾರ ರಚನೆ ಕುರಿತು ಮಾತನಾಡಿದ್ದರೂ ಅದನ್ನು ಅವರ ಬಳಿ ಹೇಗೆ ಕೇಳಲಿ, ಅವರಿಗೂ ಈ ಕುರಿತು ತಿಳುವಳಿಕೆ ಇದೆ. ಆದರೆ ರಾಷ್ಟ್ರಪತಿಗಳ ಆಡಳಿತವನ್ನು ಬೇಗನೆ ಹಿಂಪಡೆಯಬೇಕು ಎಂಬುದನ್ನು ನಾವು ಒಪ್ಪುತ್ತೇವೆ ಎಂದರು. ಇದನ್ನು ಓದಿ: ಎನ್‍ಸಿಪಿ ಯೂಟರ್ನ್ – ಶಿವಸೇನೆಯ ಸಿಎಂ ಕನಸು ಭಗ್ನ?

ಎನ್‍ಸಿಪಿ ಹಾಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಪ್ರಶ್ನೆಗೆ ಶೀಘ್ರವೇ ಉತ್ತರವನ್ನು ಪಡೆಯುತ್ತೀರಿ. ಆದರೆ ಕಾಂಗ್ರೆಸ್ ಹಾಗೂ ಎನ್‍ಸಿಪಿ ನಡುವಿನ ಮೈತ್ರಿಯಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಾನು ಹೇಗೆ ಪ್ರತಿಕ್ರಿಯಿಸಲಿ. ಪವಾರ್ ಅವರು ಏನೋ ಹೇಳಿದರೆಂದು ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *