ವಿಜಯಪುರ: ಅಥಣಿ ಮತಕ್ಷೇತ್ರದಲ್ಲಿ ಚುನಾವಣೆ ರಂಗೇರಿದೆ. ಅದರಲ್ಲೂ ಬಿಜೆಪಿಯಲ್ಲಿ ಮಾತ್ರ ಭಾರೀ ಕುತೂಹಲದ ಚುನಾವಣೆ ಇದಾಗಿದೆ. ಕಾಂಗ್ರೆಸ್ಸಿನಿಂದ ಜಂಪ್ ಮಾಡಿ ಬಿಜೆಪಿಗೆ ಬಂದ ಕುಮಟಳ್ಳಿಗೆ ಸ್ವ-ಪಕ್ಷದಲ್ಲೆ ವಿರೋಧ ಸೇರಿದಂತೆ ಅಪ್ಪುಗೆ ಕೂಡ ಸಿಗುತ್ತಿದೆ. ಡಿಸಿಎಂ ಸವದಿ ಕೂಡ ನೇರವಾಗಿಯೇ ಕುಮಟಳ್ಳಿಗೆ ಟಿಕೆಟ್ ನೀಡಿದ್ದನ್ನ ವಿರೋಧ ಮಾಡಿದ್ದರು. ಇದೀಗ ಈ ಅಸಮಾಧಾನ ಶಮನಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಮಹೇಶ್ ಕುಮಟಳ್ಳಿ ಅವರನ್ನು ಡಿಸಿಎಂ ಲಕ್ಷ್ಮಣ ಸವದಿ ನಿಂದಿಸಿದ್ದರು. ಇದರಿಂದ ನೊಂದಿದ್ದ ಕುಮಟಳ್ಳಿ ಕಣ್ಣೀರು ಹಾಕಿದ್ದರು. ಇದೇ ಬದ್ಧವೈರಿಗಳು ಇದೀಗ ಅಥಣಿಯಲ್ಲಿ ವೇದಿಕೆ ಹಂಚಿಕೊಳ್ತಿದ್ದಾರೆ.
ಅಥಣಿ ಕ್ಷೇತ್ರದಲ್ಲಿ ಬದ್ಧವೈರಿಗಳಾಗಿದ್ದ ಕಾಂಗ್ರೆಸ್ಸಿನಲ್ಲಿದ್ದು ಅನರ್ಹರಾಗಿರೋ ಮಹೇಶ್ ಕುಮಟಳ್ಳಿ, ಬಿಜೆಪಿಯ ಲಕ್ಷ್ಮಣ ಸವದಿ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಡಿಸಿಎಂ ಸ್ಥಾನಕ್ಕೇ ಕುತ್ತು ತರುವ ಅಥಣಿ ಟಿಕೆಟ್‍ಗಾಗಿ ಕೊನೇ ತನಕ ಫೈಟ್ ಮಾಡಿದ್ದರು ಲಕ್ಷ್ಮಣ್ ಸವದಿ, ಆದರೆ ಇದೀಗ ಯಡಿಯೂರಪ್ಪ ಅವರ ಸಂಧಾನದಿಂದಾಗಿ ಸವದಿ ಶಾಂತವಾಗಿದ್ದಾರೆ. ಇದನ್ನೂ ಓದಿ: ದರಿದ್ರ ಕುಮಟಳ್ಳಿ ಸುದ್ದಿ ತಗೊಂಡು ನಾನೇನ್ ಮಾಡ್ಲಿ- ಲಕ್ಷ್ಮಣ ಸವದಿ ಆಕ್ಷೇಪಾರ್ಹ ಮಾತು
ಆದರೆ ರಾಜಕೀಯ ಕಡುವೈರಿ ಅನರ್ಹ ಶಾಸಕ ಮಹೇಶ ಕುಮಟಳ್ಳಿ ಬಿಜೆಪಿ ಅಭ್ಯರ್ಥಿ ಆಗಿರುವುದು ಲಕ್ಷ್ಮಣ ಸವದಿ ಸೇರಿದಂತೆ ಅವರ ಬೆಂಬಲಿಗರಿಗೆ ಕಿಂಚಿತ್ತೂ ಇಷ್ಟವಿಲ್ಲ. ಇನ್ನು ತಾಲೂಕಿನ ಬಿಜೆಪಿ ಮುಖಂಡರು ಸೇರಿದಂತೆ ಕೆಲ ಬಿಜೆಪಿ ಕಾರ್ಯಕರ್ತರು ಕುಮಟಳ್ಳಿಗೆ ವಿರೋಧ ಮಾಡುತ್ತಿದ್ದಾರೆ. ಕೆಲವರು ಬಹಿರಂಗವಾಗಿ ವಿರೋಧ ಮಾಡುತ್ತಿದ್ದರೆ, ಇನ್ನು ಕೆಲವರು ಮನದಲ್ಲೇ ಕುದಿಯುತ್ತಿದ್ದಾರೆ. ಇದನ್ನ ತಣ್ಣಗಾಗಿಸಲು ಬಿಜೆಪಿ ನಾಯಕರು ಮುಂದಾಗಿದ್ದು, ಲಕ್ಷ್ಮಣ ಸವದಿ ಮತ್ತು ಮಹೇಶ್ ಕುಮಟಳ್ಳಿ ಒಂದೇ ವೇದಿಕೆಯಲ್ಲಿ ಸಮಾಗಮ ಆಗುತ್ತಿದ್ದಾರೆ. ಇದನ್ನೂ ಓದಿ: ಸವದಿ ನಿಂದನೆಗೆ ಕಣ್ಣೀರಿಟ್ಟ ಅನರ್ಹ ಶಾಸಕ ಕುಮುಟಳ್ಳಿ
ಇಂದು ಬೆಳಗ್ಗೆ 10 ಗಂಟೆಗೆ ಅಥಣಿಯ ನ್ಯಾಯಾಲಯ ಹತ್ತಿರ ಆರ್‍ಎಸ್ ಕುಲಕರ್ಣಿ ಸಭಾಭವನದಲ್ಲಿ ಬಿಜೆಪಿ ಸಮಾವೇಶ ಹಾಗೂ ಕುಮಟಳ್ಳಿ ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಹಲವಾರು ನಾಯಕರು ಭಾಗವಹಿಸಲಿದ್ದಾರೆ.
ಇಂದಿನ ಸಮಾವೇಶ ಭಾರೀ ಮಹತ್ವ ಪಡೆದಿದ್ದು, ಬಿಜೆಪಿ ನಾಯಕರ ಒಂದಾಗಿಸುವ ಪ್ಲಾನ್ ಗೆ ಲಕ್ಷ್ಮಣ ಸವದಿ ಮಣೆ ಹಾಕ್ತಾರೆ ಅಥವಾ ತಮ್ಮ ಮುನಿಸು ಮುಂದುವರಿಸ್ತಾರಾ ಕಾದು ನೋಡಬೇಕು.