ಬೆಂಗಳೂರು: ಉಪಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದಲ್ಲಿರುವ ಬಂಡಾಯ ಶಮನಕ್ಕೆ ಸಿಎಂ ಯಡಿಯೂರಪ್ಪ ಪ್ರಯತ್ನಿಸುತ್ತಿದ್ದು, ಇಂದು ಯಶವಂತಪುರದ ಟಿಕೆಟ್ ಆಕಾಂಕ್ಷಿಯಾಗಿದ್ದ ನಟ ಜಗ್ಗೇಶ್ ಅವರನ್ನು ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.
ರಾಜ್ಯದಲ್ಲಿ ಉಪಚುನಾವಣಾ ಕಾವು ದಿನೆ ದಿನೆ ಹೆಚ್ಚಾಗುತ್ತಿದೆ. ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸೇರಿರುವ ಅನರ್ಹ ಶಾಸಕರಿಗೆ ಉಪಚುನಾವಣೆ ಟಿಕೆಟ್ ನೀಡಿರುವುದಕ್ಕೆ ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿದೆ. ಯಶವಂತಪುರ ಕ್ಷೇತ್ರದಲ್ಲಿ ಎಸ್.ಟಿ ಸೋಮಶೇಖರ್ ಸ್ಪರ್ಧೆಯಿಂದ ನಟ ಜಗ್ಗೇಶ್ ಅಸಮಾಧಾನಗೊಂಡಿದ್ದರು.
ಈ ವಿಚಾರವಾಗಿ ಜಗ್ಗೇಶ್ ಅವರನ್ನು ತಮ್ಮ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಕ್ಕೆ ಕರೆಸಿಕೊಂಡ ಸಿಎಂ ಬಿಎಸ್‍ವೈ, ನಮ್ಮ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಜೊತೆ ನಿಂತು ಅವರನ್ನು ಗೆಲ್ಲಿಸುವಂತೆ ಮತ್ತು ಸೋಮಶೇಖರ್ ಮೇಲೆ ಸಿಟ್ಟು ಬಿಟ್ಟು ಕೆಲಸ ಮಾಡುವಂತೆ ಜಗ್ಗೇಶ್ ಅವರಿಗೆ ಸಿಎಂ ಸೂಚಿಸಿದ್ದಾರೆ. ಅಲ್ಲದೇ ಯಶವಂತಪುರದಲ್ಲಿ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳುವಂತೆ ಹೇಳಿದ್ದಾರೆ.
ಸಿಎಂ ಭೇಟಿಯ ನಂತರ ಮಾತನಾಡಿದ ಜಗ್ಗೇಶ್, ಉಪಚುನಾವಣೆಯಲ್ಲಿ ಕೆಲಸ ಮಾಡೋಕೆ ಸಿಎಂ ಆದೇಶ ಮಾಡಿದ್ದಾರೆ. ಹಿಂದೆ ಕಡೆಗಳಿಗೆಯಲ್ಲಿ ನಾನು ಯಶವಂತಪುರದ ಅಭ್ಯರ್ಥಿ ಆಗಿದ್ದೆ. 60 ಸಾವಿರ ಮತಕೊಟ್ಟ ಎಲ್ಲರಿಗೂ ಧನ್ಯವಾದಗಳು. ಯಡಿಯೂರಪ್ಪ ಮೂರೂವರೆ ವರ್ಷ ಸಿಎಂ ಆಗಿ ಮುಂದುವರಿಯಬೇಕು. ಅದು ನಮ್ಮ ಧ್ಯೇಯ. ನಮ್ಮ ಮನೆ ಬಿಜೆಪಿ ಭದ್ರವಾಗಿರುತ್ತದೆ. ಅದಕ್ಕಾಗಿ ಸೋಮಶೇಖರ್ ಜತೆ ವೇದಿಕೆ ಹಂಚಿಕೆ ಮಾಡ್ತೇನೆ. ಅವರು ಹಿಂದೆ ನಮ್ಮ ವಿರೋಧಿ ಅಭ್ಯರ್ಥಿಯಾಗಿದ್ರು. ಅವರು ಎದುರಾಳಿಯಾಗಿದ್ದಾಗ ಹೋರಾಟ ಮಾಡಿದ್ದೆ. ಪಕ್ಷದಲ್ಲಿ ಬಂದಾಗ ಅವರ ಹೆಗಲ ಮೇಲೆ ಕೈ ಹಾಕಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸೋಮಶೇಖರ್ ಅವರು ಜೆಡಿಎಸ್ ಅಭ್ಯರ್ಥಿ ವಿರುದ್ಧ 10,711 ಮತಗಳ ಅಂತರದಿಂದ ಜಯಗಳಿಸಿದ್ದರು. ಸೋಮಶೇಖರ್ 1,15,273 ಮತಗಳನ್ನು ಪಡೆದಿದ್ದರೆ ಜೆಡಿಎಸ್ಸಿನ ಜವರಾಯಿ ಗೌಡ 1,04,562 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ನಟ ಜಗ್ಗೇಶ್ ಅವರು 59,308 ಮತಗಳನ್ನು ಗಳಿಸಿದ್ದರು.