– ಶಾಲೆಯಲ್ಲೇ ಬಾಲಕ ಆತ್ಮಹತ್ಯೆಗೆ ಯತ್ನ
ಮುಂಬೈ: ಶಾಲೆಗೆ ತೆಗೆದುಕೊಂಡು ಹೋಗಲು ತಂದೆ ಬೈಕ್ ಕೊಟ್ಟಿಲ್ಲವೆಂದು ಸಿಟ್ಟಿನಿಂದ ಅಪ್ರಾಪ್ತ ಬಾಲಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ ಘಟನೆ ಕಲಂಬೋಲಿ ಸೆಕ್ಟರ್ 1ರ ನ್ಯೂ ಸುಧಾಗಡ್ ನಲ್ಲಿ ನಡೆದಿದೆ.
ಬಾಲಕನನ್ನು ಶಿವಂ ಯಾದವ್ ಎಂದು ಗುರುತಿಸಲಾಗಿದ್ದು, ಈತ 11ನೇ ತರಗತಿಯಲ್ಲಿ ಓಡುತ್ತಿದ್ದನು. ಘಟನೆಯಿಂದ ಶಿವಂ ದೇಹ ಶೇ. 90ರಷ್ಟು ಸುಟ್ಟಿದೆ.
ನಡೆದಿದ್ದೇನು..?
ಶುಕ್ರವಾರ ಬೆಳಗ್ಗೆ ಶಿವಂ ತನ್ನ ತಂದೆಯ ಬಳಿ ಶಾಲೆಗೆ ಬೈಕ್ ತೆಗೆದುಕೊಂಡು ಹೋಗುವುದಾಗಿ ಕೇಳಿದ್ದಾನೆ. ಆದರೆ ಮಗನಿಗೆ 17 ವರ್ಷ ಆಗಿರುವುದರಿಂದ ತಂದೆ ಈ ಕೋರಿಕೆಯನ್ನು ತಿರಸ್ಕರಿಸಿದ್ದಾರೆ.
ಇದರಿಂದ ಸಿಟ್ಟುಗೊಂಡ ಶಿವಂ ಶಾಲೆಗೆ ತೆರಳಿ ಎರಡನೇ ಮಹಡಿಯಲ್ಲಿರುವ ವಾಶ್ ರೂಂಗೆ ತೆರಳಿ ಬೆಂಕಿ ಹಚ್ಚಿಕೊಂಡಿದ್ದಾನೆ. ಇದನ್ನು ಗಮನಿಸಿದ ಶಾಲಾ ಸಿಬ್ಬಂದಿ ಕೂಡಲೇ ಆತನನ್ನು ವಾಶ್ ರೂಂನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅದಾಗಲೇ ಬೆಂಕಿ ಆತನ ದೇಹವನ್ನು ಆವರಿಸಿತ್ತು. ಆದರೂ ಸಿಬ್ಬಂದಿ ಬೆಂಕಿಯನ್ನು ನಂದಿಸಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಕಲಂಬೋಲಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸತೀಶ್ ಗಾಯಕ್ವಾಡ್ ತಿಳಿಸಿದ್ದಾರೆ.
ಇತ್ತ ಆಸ್ಪತ್ರೆಗೆ ದಾಖಲಾಗಿರುವ ಶಿವಂ ಬಳಿ ಕೃತ್ಯ ಎಸಗಲು ಕಾರಣವೇನೆಂದು ವೈದ್ಯರು ಕೇಳಿದ್ದಾರೆ. ಈ ವೇಳೆ ಆತ, ಶಾಲೆಗೆ ಬೈಕ್ ತೆಗೆದುಕೊಂಡು ಹೋಗಲು ತಂದೆ ಬಿಡಲಿಲ್ಲ. ಇದರಿಂದ ಸಿಟ್ಟುಗೊಂಡು ಈ ರೀತಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಂನನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಶಿವಂ ತಂದೆ ದೀಪಕ್ ಯಾದವ್ ಅವರು ನಾಗ್ಪದ್ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶಿವಂ ಅಪ್ರಾಪ್ತನಾಗಿರುವುದರಿಂದ ಆತನಿಗೆ ಬೈಕ್ ಕೊಡುತ್ತಿರಲಿಲ್ಲ. ಯಾಕಂದರೆ ಪರವಾನಿಗೆ ಇಲ್ಲದೆ ಬೈಕ್ ತೆಗೆದುಕೊಂಡು ಹೋದರೆ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬೀಳಬಹುದೆಂಬ ನಿಟ್ಟಿನಲ್ಲಿ ದೀಪಕ್ ಆತನಿಗೆ ಬೈಕ್ ಓಡಿಸಲು ಬಿಡುತ್ತಿರಲಿಲ್ಲ. ಆದರೂ ಶಿವಂ ಅನೇಕ ಬಾರಿ ಮನೆಯವರಿಗೆ ಗೊತ್ತಿಲ್ಲದೆ ಬೈಕ್ ತೆಗೆದುಕೊಂಡು ಹೋಗುತ್ತಿದ್ದನು. ಸದ್ಯ ಘಟನೆಯಿಂದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಬ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಶಾಲೆಯ ಸಿಸಿಟಿವಿ ದೃಶ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೃಶ್ಯದಲ್ಲಿ ಬಾಲಕ ತನ್ನ ಕೈಯಲ್ಲಿ ಏನೋ ಹಿಡಿದುಕೊಂಡು ವಾಶ್ ರೂಮಿಗೆ ಓಡುತ್ತಿರುವುದು ಸೆರೆಯಾಗಿದೆ. ಅಲ್ಲದೆ ವಾಶ್ ರೂಮಿನಲ್ಲಿ ಸುಡಲು ಬೇಕಾದ ವಸ್ತುಗಳು ಕೂಡ ಪತ್ತೆಯಾಗಿದ್ದು, ಅವುಗಳನ್ನು ಆತನ ಮನೆಯಿಂದಲೇ ತಂದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.