ಮನೆ ಮಾರಾಟಕ್ಕಿದೆ: ಕಾಡುವ ದೆವ್ವಕ್ಕೂ ನಗುವಿನ ಕಚಗುಳಿಯಿಡೋ ಚಿತ್ರ!

Public TV
2 Min Read
mane maratakkide 3

ಬೆಂಗಳೂರು: ಪ್ರತಿ ಪ್ರೇಕ್ಷಕರೂ ಕೂಡಾ ಸಿನಿಮಾ ನೋಡೋ ಪ್ರಧಾನ ಉದ್ದೇಶ ಮನೋರಂಜನೆ. ಅದರಲ್ಲಿಯೂ ಹಾಸ್ಯ ಸನ್ನಿವೇಶಗಳಿಗೆ ಮನಸೋಲದವರೇ ಇಲ್ಲ. ಹಾಗಿರುವಾಗ ಒಂದಿಡೀ ಚಿತ್ರವೇ ಕಾಮಿಡಿಮಯವಾಗಿದ್ದರೆ ಅದರತ್ತ ಪ್ರೇಕ್ಷಕರು ಆಕರ್ಷಿತರಾಗದಿರಲು ಸಾಧ್ಯವೇ ಇಲ್ಲ. ಈ ಕಾರಣದಿಂದಲೇ ಅಗಾಧ ನಿರೀಕ್ಷೆ ಮೂಡಿಸಿದ್ದ ‘ಮನೆ ಮಾರಾಟಕ್ಕಿದೆ’ ಚಿತ್ರವೀಗ ಬಿಡುಗಡೆಯಾಗಿದೆ. ಮಾರಾಟಕ್ಕಿರೋ ಮನೆ, ಅದಕ್ಕೆ ಥರ ಥರದ ಅನಿವಾರ್ಯತೆ, ವ್ಯಕ್ತಿತ್ವದ ಪೋಷಾಕು ತೊಟ್ಟು ಎಂಟ್ರಿ ಕೊಡುವ ಆಸಾಮಿಗಳೊಂದಿಗೆ ಭರಪೂರ ನಗುವಿನ ಮ್ಯಾಜಿಕ್ಕನ್ನು ನಿರ್ದೇಶಕ ಮಂಜು ಸ್ವರಾಜ್ ಮಾಡಿದ್ದಾರೆ. ಇದರಲ್ಲಿನ ಕಾಮಿಡಿ ಕಿಕ್ ಎಂಥಾದ್ದಿದೆಯೆಂದರೆ, ಅದು ಪ್ರೇಕ್ಷಿಕರಿಗೆ ಮಾತ್ರವಲ್ಲದೇ ಕಾಟ ಕೊಡಲು ಬಂದ ದೆವ್ವಗಳಿಗೂ ನಗೆಯ ಕಚಗುಳಿ ಇಡುವಂತಿದೆ!

Mane Maratakkide B

ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಒಂದೆಡೆ ಸೇರಿದ್ದಾರೆಂದರೆ ಅಲ್ಲಿ ನಗುವಿನ ಒರತೆ ಹುಟ್ಟಿಕೊಳ್ಳೋದು ಗ್ಯಾರೆಂಟಿ ಎಂಬ ನಂಬಿಕೆ ಎಲ್ಲರಲ್ಲಿಯೂ ಇತ್ತು. ಅದನ್ನು ನಿಜವಾಗಿಸುವಂತೆಯೇ ನಿರ್ದೇಶಕರು ಪಾತ್ರಗಳನ್ನು ರೂಪಿಸಿದ್ದಾರೆ. ಮನೋರಂಜನೆಯೇ ಪ್ರಧಾನವಾಗಿರುವ ಕಥೆ, ಅದಕ್ಕೆ ಪೂಕವಾದ ಪಾತ್ರಗಳು ಮತ್ತು ಕ್ಷಣ ಕ್ಷಣವೂ ನಗೆಯುಕ್ಕಿಸುವಂತೆ ಪೋಣಿಸಿರುವ ಹಾಸ್ಯ ಸನ್ನಿವೇಶಗಳೊಂದಿಗೆ ಮಾರಾಟಕ್ಕಿರೋ ಮನೆ ತುಂಬಾ ನಗು ಹರಿಡಿಕೊಂಡಿದೆ. ಅದು ಪ್ರತಿ ನೋಡುಗರ ಮೈ ಮನಸುಗಳನ್ನೂ ವ್ಯಾಪಿಸಿಕೊಂಡು ಮುದಗೊಳಿಸುವಷ್ಟು ಶಕ್ತವಾಗಿದೆ.

Mane Maratakkide Main

ವಿದೇಶದಲ್ಲಿ ನೆಲೆಸಿದವನೊಬ್ಬನಿಗೆ ಊರಲ್ಲಿ ಅಪ್ಪ ಅಮ್ಮನಿರೋ ಮನೆಯನ್ನು ಮಾರಾಟ ಮಾಡೋ ಹಂಬಲ. ಆದರೆ ಅದರೊಳಗಿನ ದೆವ್ವ ಭೂತಗಳ ಕಾಟ ಊರಿಡೀ ತುಂಬಿಕೊಂಡು ಯಾರೆಂದರೆ ಯಾರೂ ಅದನ್ನು ಖರೀದಿ ಮಾಡೋ ಧೈರ್ಯ ತೋರೋದಿಲ್ಲ. ಈ ಕಾರಣದಿಂದಲೇ ಮನೆ ಮಾಲೀಕರು ಇದರೊಳಗಿನ ದೆವ್ವ ಓಡಿಸಿ ಮನೆ ಮಾರಾಟ ಮಾಡಿ ಕೊಟ್ಟವರಿಗೆ ಲಕ್ಷಗಟ್ಟಲೆ ಬಂಪರ್ ಬಹುಮಾನ ಘೋಷಣೆ ಮಾಡುತ್ತಾರೆ. ಬದುಕಿನ ನಾನಾ ಜಂಜಡಗಳಲ್ಲಿ ಮುಳುಗಿದ್ದ ನಾಲ್ಕು ಮಂದಿ ಆ ಸವಾಲನ್ನು ಸ್ವೀಕರಿಸಿ ದೆವ್ವವಿರೋ ಮನೆ ಪ್ರವೇಶಿಸಿದ ನಂತರ ಸಂಭವಿಸೋ ವಿದ್ಯಮಾನಗಳೇ ಈ ಸಿನಿಮಾದ ಜೀವಾಳ.

mane maratakkide

ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಹೇಗಾದರೂ ಮಾಡಿ ಕಾಸು ಹೊಂದಿಸೋ ದರ್ದು ಹೊಂದಿರೋ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಅವರೆಲ್ಲರ ಪಾತ್ರಗಳಿಗೂ ಒಂದು ಹಿನ್ನೆಲೆ ಇದೆ. ಅವರಿಗೆ ಬಂದೊದಗಿದ ಕಾಸಿನ ಅನಿವಾರ್ಯತೆಗಳನ್ನು ನಿರ್ದೇಶಕರು ಮಜವಾಗಿಯೇ ತೋರಿಸಿದ್ದಾರೆ. ಇನ್ನುಳಿದಂತೆ ಶ್ರುತಿ ಹರಿಹರನ್ ಮತ್ತು ಕಾರುಣ್ಯಾ ರಾಮ್ ಪಾತ್ರಗಳೂ ಮೋಹಕವಾಗಿವೆ. ಒಂದು ಸಿನಿಮಾದ ಒಂದಷ್ಟು ಕಾಮಿಡಿ ಸನ್ನಿವೇಶಗಳನ್ನೇ ಸಮರ್ಥವಾಗಿ ನಿಭಾಯಿಸೋದು ಕಷ್ಟ. ಆದರೆ ನಿರ್ದೇಶಕ ಮಂಜು ಸ್ವರಾಜ್ ಒಂದಿಡೀ ಚಿತ್ರವನ್ನೇ ಭರಪೂರ ನಗುವಲ್ಲಿ ಮಿಂದೇಳುವಂತೆ ಕಟ್ಟಿ ಕೊಟ್ಟಿರೋದು ಇಡೀ ಸಿನಿಮಾದ ಪ್ಲಸ್ ಪಾಯಿಂಟ್. ನೀವೂ ಒಮ್ಮೆ ಮಾರಾಟಕ್ಕಿರೋ ದೆವ್ವದ ಮನೆಯನ್ನು ಕಣ್ತುಂಬಿಕೊಳ್ಳಿ. ಖಂಡಿತಾ ಭರ್ಜರಿ ಕಾಮಿಡಿ ನಗವಿನಲೆಯಲ್ಲಿ ಮಿಂದೇಳುವಂತೆ ಮಾಡುತ್ತದೆ.

ರೇಟಿಂಗ್: 3.5/5

Share This Article
Leave a Comment

Leave a Reply

Your email address will not be published. Required fields are marked *