ನನ್ನ ಮಗ ಉಪಚುನಾವಣೆಯಲ್ಲಿ ಸ್ಪರ್ಧಿಸಲ್ಲ – ಮಾಧ್ಯಮಗಳ ವಿರುದ್ಧ ಈಶ್ವರಪ್ಪ ಕಿಡಿ

Public TV
2 Min Read
eshwarappa

– ಪ್ರಸ್ತುತ ರಾಜಕೀಯದಲ್ಲಿ ನಾವುಗಳೆಲ್ಲರೂ ಸ್ವಾರ್ಥಿಗಳಾಗಿದ್ದೇವೆ

ಶಿವಮೊಗ್ಗ: ನನ್ನ ಪುತ್ರ ಕೆ.ಇ.ಕಾಂತೇಶ್ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಆ ಬಗ್ಗೆ ನಾನು ಯೋಚನೆ ಮಾಡಿಯೇ ಇಲ್ಲ ಎಂದು ನಾನು ಮೂರು ಬಾರಿ ಹೇಳಿದ್ದೇನೆ. ಆದರೆ ಮಾಧ್ಯಮದವರು ಮತ್ತೆ ಮತ್ತೆ ಅದನ್ನೇ ಕೇಳುತ್ತಾರೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ನಾನು ಮತ್ತು ನನ್ನ ಪತ್ನಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ನಮಸ್ಕಾರ ಮಾಡಿ ಬಂದರೆ, ಈಶ್ವರಪ್ಪ ರಾಣಿಬೆನ್ನೂರು ಕ್ಷೇತ್ರಕ್ಕೆ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಸ್ವಾಮೀಜಿಗಳ ಮೂಲಕ ಲಾಬಿ ನಡೆಸುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಹಾಕ್ತಾರೆ. ಕೆಲವು ಟಿವಿಯವರಿಗೆ ಏನು ರೋಗ ಆಗಿದೆ ನನಗಂತು ಗೊತ್ತಾಗ್ತಿಲ್ಲ. ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು ನನಗಂತು ಅರ್ಥನೇ ಆಗಲ್ಲ. ಮಾಧ್ಯಮಗಳು ಸುಮ್ಮನೇ ಗೊಂದಲ ಸೃಷ್ಟಿ ಮಾಡುತ್ತಿವೆ ಎಂದು ಸಚಿವ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

K. S. Eshwarappa

ಪ್ರಸ್ತುತ ರಾಜಕೀಯ ಪರಿಸ್ಥಿತಿ ನೋಡಿದರೆ ನಾವುಗಳೆಲ್ಲರೂ ಸ್ವಾರ್ಥಿಗಳಾಗಿದ್ದೇವೆ ಎಂದು ಎನಿಸುತ್ತಿದೆ. ಕನಕದಾಸ ಹಾಗು ಸಂಗೊಳ್ಳಿರಾಯಣ್ಣ ಅವರ ಹೆಸರುಗಳನ್ನು ಕೇವಲ ಹಿಂದುಳಿದವರೆಂದು ಹೇಳಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬಂದರೆ ಇವರಿಬ್ಬರ ಮಹಾ ನಾಯಕರ ಹೆಸರು ಬಳಸಿಕೊಳ್ಳುವ ಮೂಲಕ ಇವರಿಬ್ಬರಿಗೆ ಬೆಲೆ ಕೊಡಬೇಕೆಂದು ಅಲ್ಲ. ಬದಲಿಗೆ ಇದರಿಂದ ಎಷ್ಟರ ಮಟ್ಟಿಗೆ ರಾಜಕೀಯ ಲಾಭ ಪಡೆದುಕೊಳ್ಳಬಹುದು ಎಂದು ಯೋಚಿಸಿ ಬಳಸಿಕೊಳ್ಳುವಂತೆ ಆಗಿರುವುದು ನನಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬಂದರೂ ಕನಕದಾಸರು ಹಾಗೂ ಸಂಗೊಳ್ಳಿರಾಯಣ್ಣರ ವಿಚಾರಗಳನ್ನ ಜನಜಾಗೃತಿ ಮೂಡಿಸಲು ರಾಜ್ಯ ಸರ್ಕಾರದಲ್ಲಿ ಎಷ್ಟೇ ಹಣ ಮೀಸಲು ಇಟ್ಟರೂ ಕಡಿಮೆಯೇ ಎಂದರು. ಕನಕದಾಸರು ಜಾತಿ ಮೀರಿದ ವ್ಯಕ್ತಿತ್ವ ಹೊಂದಿದ್ದವರಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗಬೇಕು. ಆದರೆ ಕನಕದಾಸರನ್ನು ಸೇರಿದಂತೆ ನಾವು ಬಸವಣ್ಣ, ಶಂಕರಾಚಾರ್ಯರು, ಅಂಬೇಡ್ಕರ್ ಮುಂತಾದವರನ್ನು ಜಾತಿಗೆ ಸೀಮಿತಗೊಳಿಸುತ್ತಿದ್ದೇವೆ. ರಾಜಕಾರಣಿಗಳು ಸ್ವಾರ್ಥರಾಗುತ್ತಿದ್ದಾರೆ. ದಾರ್ಶನಿಕ ವ್ಯಕ್ತಿಗಳು ಕೂಡ ರಾಜಕೀಯಕ್ಕೆ ಬಳಕೆಯಾಗುತ್ತಿರುವುದು ನೋವು ತಂದಿದೆ. ಇಂತಹ ಸ್ವಾರ್ಥ ರಾಜಕಾರಣಿಗಳಿಗೆ ನನ್ನ ಧಿಕ್ಕಾರವಿರಲಿ ಎಂದಿದ್ದಾರೆ.

Eshwarappa

ಕನಕದಾಸರನ್ನು ಫೋಟೋ, ಪೂಜೆ, ಆಚರಣೆಗೆ ಮಾತ್ರ ಸೀಮಿತಗೊಳಿಸಬಾರದು. ಅವರ ಆದರ್ಶಗಳನ್ನು ಪಾಲಿಸಬೇಕು. ಅವರ ಕುಲ ಕುಲ ಎಂದು ಹೊಡೆದಾಡದಿರಿ ಎಂಬ ಮಾತು ಎಲ್ಲ ಕಾಲಕ್ಕೂ ಸಲ್ಲುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *