ಬೆಂಗಳೂರು: ನಗರದ ಇನ್ ಫ್ಯಾಂಟ್ರಿ ರಸ್ತೆಯ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಮಕ್ಕಳ ಜಾತ್ರೆ ಕಾರ್ಯಕ್ರಮದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಚಿತ್ರದ ಡೈಲಾಗ್ ಹೇಳಿ ಮಕ್ಕಳನ್ನು ರಂಜಿಸಿದ್ದಾರೆ.
ಇಂದು ಮಕ್ಕಳ ದಿನಾಚರಣೆ ಹಿನ್ನಲೆಯಲ್ಲಿ ನಗರ ಪೊಲೀಸ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯಶ್, ಮೊದಲು ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿದರು.
ನಮ್ಮನ್ನ ಮಕ್ಕಳ ದಿನಾಚರಣೆಗೆ ಕರೆಸಿದ್ದು ನನ್ನನ್ನು ಮಕ್ಕಳ ಜೊತೆ ಮಕ್ಕಳಾಗೋಕೆ ಅನಿಸ್ತಿದೆ. ಪೊಲೀಸರ ಕೆಲಸ ತುಂಬಾ ರಿಸ್ಕಿ ಕೆಲಸವಾಗಿದೆ. ನಮ್ಮ ರಕ್ಷಣೆಗೆ ಪೊಲೀಸರು ಸದಾ ದುಡಿಯುತ್ತಿರುತ್ತಾರೆ. ಪರಿಹಾರ ಸಂಸ್ಥೆ ತುಂಬಾ ಒಳ್ಳೆ ಕೆಲಸ ಮಾಡುತ್ತಿದೆ ಎಂದರು.
ಕಮಿಷನರ್ ಕಚೇರಿಯಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಿರುವುದು ತುಂಬಾ ಖುಷಿಯ ವಿಚಾರ. ಮಕ್ಕಳು ಪೊಲೀಸರು ಬಂದರೆ ಹೆದರಿಕೊಳ್ಳಬಾರದು, ಧೈರ್ಯ ಬರುತ್ತೆ ಅಂದುಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಕೆಜಿಎಫ್ ಚಿತ್ರದ ಡೈಲಾಗ್ ಹೊಡೆದರು. ‘ಹತ್ತು ಜನರನ್ನ ಹೊಡೆದು ಡಾನ್ ಆದವನಲ್ಲ ನಾನು. ನಾನು ಹೊಡೆದಿರೋ ಹತ್ತು ಜನನೂ ಡಾನೇ..’ ಎಂದಾಗ ನೆರೆದಿದ್ದವರು ಶಿಳ್ಳೆ ಹೊಡೆದರು. ಈ ಮೂಲಕ ಕಾರ್ಯಕ್ರಮದಲ್ಲಿ ಕೆಜಿಎಫ್ ಚಿತ್ರದ ಡೈಲಾಗ್ ಹೇಳಿ ಮಕ್ಕಳನ್ನ ರಂಜಿಸಿದರು.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಮಕ್ಕಳೆಲ್ಲರಿಗೂ ಶುಭಾಶಯಗಳು. ಯಶ್ ಅವರಿಗೂ ಶುಭಾಶಯಗಳು. ಹೆಣ್ಮಕ್ಕಳಿಗೆ ಧೈರ್ಯ ಇರಬೇಕು. ನಿಮ್ಮನ್ನು ಇಲ್ಲಿಗೆ ಕರೆಸಲು ಉದ್ದೇಶ ಇದೆ. ನಿಮಗೆ ಪೊಲೀಸರು ಅಂದರೆ ನಿಮ್ಮ ಸ್ನೇಹಿತರಿದ್ದ ಹಾಗೆ. ಇದು ದೊಡ್ಡ ಕಚೇರಿ ಅದಕ್ಕೆ ನಿಮಗೆ ಧೈರ್ಯ ಬರಲಿ ಅಂತ ಕರೆಸಿದ್ದು. ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ನಾವು ಇನ್ನು ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೆಚ್ಚುವರಿ ಆಯುಕ್ತ ಉಮೇಶ್ ಉಪಸ್ಥಿತರಿದ್ದರು.