ಚೆನ್ನೈ: ಮದುವೆ ನಿಲ್ಲಿಸಲು ವಧುವೊಬ್ಬಳು ತನ್ನ ಪ್ರಿಯಕರನಿಗೆ ಜೊತೆಗಿರುವ ಫೋಟೋಗಳನ್ನು ವರ ಹಾಗೂ ಆತನ ಕುಟುಂಬಸ್ಥರಿಗೆ ಕಳುಹಿಸು ಎಂದು ಹೇಳಿದ ಘಟನೆಯೊಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ವಧುವಿನ ಕುಟುಂಬಸ್ಥರು ಬಲವಂತವಾಗಿ ಆಕೆಗೆ ಮದುವೆ ಮಾಡುತ್ತಿದ್ದರು. ಈ ಮದುವೆಯನ್ನು ನಿಲ್ಲಿಸಲು ವಧು ತನ್ನ ಪ್ರಿಯಕರನಿಗೆ ಜೊತೆಗಿರುವ ಫೋಟೋಗಳನ್ನು ವರ ಹಾಗೂ ಆತನ ಕುಟುಂಬಸ್ಥರಿಗೆ ಕಳುಹಿಸು ಎಂದು ಹೇಳಿದ್ದಾಳೆ. ಆರತಕ್ಷತೆ ಕಾರ್ಯಕ್ರಮದಲ್ಲಿ ವರನ ಕುಟುಂಬಸ್ಥರು ವಧು ಹಾಗೂ ಆಕೆಯ ಪ್ರಿಯಕರ ಜೊತೆಗಿರುವ ಫೋಟೋ ನೋಡಿ ತಕ್ಷಣ ಮದುವೆಯನ್ನು ಮುರಿದಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಬಂಧಿ ಮಹಿಳೆಯೊಬ್ಬರ ಜೊತೆ ವರನ ಮದುವೆ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಫೋಟೋ ಕಳುಹಿದ ವಿಷಯ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ವಧು ಹಾಗೂ ಆಕೆಯ ಪ್ರಿಯಕರನನ್ನು ಠಾಣೆಗೆ ಕರೆಸಿಕೊಂಡು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಮೊದಲು ವಧುವಿನ ತಂದೆ ಫೋಟೋ ಕಳುಹಿಸಿದವನ ವಿರುದ್ಧ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಫೋಟೋ ಕಳುಹಿಸಿದ ನಂಬರನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ನೆಸ್ಪಕ್ಕಂ ನಿವಾಸಿ ಫೋಟೋಗಳನ್ನು ಕಳುಹಿಸಿದ್ದು, ಪೊಲೀಸರು ಆತನ ಮೊಬೈಲ್ ವಶಕ್ಕೆ ಪಡೆದುಕೊಂಡು ಮೊಬೈಲ್ ಡೇಟಾವನ್ನು ಸಂಗ್ರಹಿಸಿದ್ದಾರೆ. ಮೊಬೈಲ್ ಪರಿಶೀಲಿಸುವಾಗ ಯುವಕ ಮೆಸೇಜ್ ಡಿಲೀಟ್ ಮಾಡಿರುವುದು ಪೊಲೀಸರಿಗೆ ತಿಳಿಯಿತು. ಈ ಬಗ್ಗೆ ಆತನನ್ನು ಪ್ರಶ್ನಿಸಿದಾಗ ಸ್ವತಃ ವಧು ಜೊತೆಗಿರುವ ಫೋಟೋವನ್ನು ಕಳುಹಿಸು ಎಂದು ಮೆಸೇಜ್ ಮಾಡಿದ್ದಳು ಎಂದು ಹೇಳಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಯುವಕ, ನಾನು ಯುವತಿಯನ್ನು ತುಂಬಾ ಪ್ರೀತಿಸುತ್ತೇನೆ. ಈ ವಿಷಯ ಆಕೆಯ ಕುಟುಂಬಸ್ಥರಿಗೆ ಗೊತ್ತಾಗಿ ಅವರು ಬಲವಂತವಾಗಿ ಮದುವೆ ಮಾಡಿಸುತ್ತಿದ್ದರು. ಹಾಗಾಗಿ ಈ ಮದುವೆಯನ್ನು ನಿಲ್ಲಿಸಲು ನಾವು ಈ ಪ್ಲಾನ್ ಮಾಡಿದ್ದೆವು ಎಂದು ಹೇಳಿದ್ದಾನೆ. ಸದ್ಯ ವಧುವಿನ ತಂದೆ ತನ್ನ ದೂರನ್ನು ವಾಪಸ್ಸು ಪಡೆದಿದ್ದು, ಇಬ್ಬರ ಕಡೆಯವರನ್ನು ಪೊಲೀಸರು ಸಮಾಧಾನ ಮಾಡಿ ಕಳುಹಿಸಿದ್ದಾರೆ.