ಮೈಸೂರು: ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಶಸ್ತಿ ಕೊಡಲು ಸಿಎಂ ಯಡಿಯೂರಪ್ಪ ಅವರಿಗೆ ಸಮಯ ಸಿಗುತ್ತಿಲ್ಲ. ಹಾಗಾಗಿ ಪ್ರಶಸ್ತಿ ಸ್ವೀಕರಿಸಲು ಎರಡು ವರ್ಷದಿಂದ ಸಿಬ್ಬಂದಿ ಕಾಯುತ್ತಿದ್ದಾರೆ.
ಪೊಲೀಸ್ ಇಲಾಖೆ ಮಾದರಿಯಲ್ಲಿ ಅರಣ್ಯ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ ನೀಡಲಾಗುತ್ತದೆ. ಇದಕ್ಕಾಗಿ ಪ್ರಶಸ್ತಿ ಪಟ್ಟಿ ಕೂಡ ಪ್ರಕಟವಾಗಿದೆ. 2017ರಲ್ಲಿ ಸರ್ಕಾರದಿಂದ ಅರಣ್ಯ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ ಕೊಡಲು ನಿರ್ಧಾರ ಮಾಡಲಾಗಿತ್ತು.
2018ರಲ್ಲಿ 25 ಸಿಬ್ಬಂದಿಗೆ ಪ್ರಶಸ್ತಿ ನೀಡುವುದಾಗಿ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಪ್ರತಿ ವರ್ಷ ಮಾರ್ಚ್ 21 ವಿಶ್ವ ಅರಣ್ಯ ದಿನದಂದು ಪದಕ ವಿತರಿಸುವುದಾಗಿ ನಿರ್ಧರಿಸಲಾಗಿತ್ತು. ಆದರೆ 2018ರಲ್ಲಿ ಮಾರ್ಚ್ ನಿಂದ ಸೆಪ್ಟೆಂಬರ್ ಗೆ ಈ ಕಾರ್ಯಕ್ರಮ ಮುಂದೂಡಲಾಗಿತ್ತು. ಮತ್ತೆ ಸೆಪ್ಟೆಂಬರ್ ನಿಂದ ಮುಂದೂಡಲಾಗಿತ್ತು.
ಇದೀಗ 2019ರ ಪಟ್ಟಿ ಕೂಡ ಪ್ರಕಟವಾಗಿ ನವೆಂಬರ್ ಬಂದರು ಪದಕ ಮಾತ್ರ ವಿತರಣೆ ಆಗಿಲ್ಲ. ಅರಣ್ಯ ಇಲಾಖೆಗೆ ಪ್ರಶಸ್ತಿ ಕೊಡಲು ಸಿಎಂಗೆ ಇಷ್ಟೊಂದು ನಿರುತ್ಸಾಹವೆ ಅಥವಾ ಸಮಯವೇ ಸಿಗುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ.