ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಬಿಟ್ಟು ಹೋಗುವ ನಾಯಕರು ಮತ್ತೆ ವಾಪಸ್ ಬರುತ್ತಾರೆ ಎಂದು ಸಚಿವ ಸಿಟಿ ರವಿ ಅವರು ಹೇಳಿದ್ದು, ಪಕ್ಷ ಬಿಟ್ಟು ಹೋದವರಿಗೆ ಕೆಟ್ಟ ಅನುಭವವಾಗಿ ವಾಪಸ್ ಬಂದಿರುವ ಹಲವು ಉದಾಹರಣೆಗಳು ನಮ್ಮ ಮುಂದಿದೆ ಎಂದು ಹೇಳಿದ್ದಾರೆ.
ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ನಾಯಕರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಆ ಪಕ್ಷದ ನಾಯಕರೇ ಬಿಟ್ಟು ಹೊರಬರುತ್ತಿದ್ದಾರೆ. ಆದರೆ ಇಂದು ಕೆಲವರು ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಹೋಗುತ್ತಿದ್ದಾರೆ. ನಮ್ಮ ಪಕ್ಷ ಸಿದ್ಧಾಂತ ಮೇಲೆ ನಿಂತಿದ್ದು, ಎಲ್ಲರಿಗೂ ಸಮಾನ ಅವಕಾಶ ಲಭಿಸುತ್ತದೆ ಎಂದು ಪರೋಕ್ಷವಾಗಿ ರಾಜು ಕಾಗೆ ಅವರಿಗೆ ಟಾಂಗ್ ನೀಡಿದರು.
ಇದೇ ವೇಳೆ ಹೊಸಕೋಟೆ ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬುಧವಾರ ಸುಪ್ರೀಂಕೋರ್ಟ್ ತೀರ್ಪು ನೋಡಿಕೊಂಡು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ ಮಾಡುತ್ತೇವೆ. ಕೋರ್ಟ್ ತೀರ್ಪಿನ ಮೇಲೆ ಚುನಾವಣೆ ನಡೆಯುವುದು ನಿರ್ಧಾರವಾಗುತ್ತೆ. ಶರತ್ ಬಚ್ಚೇಗೌಡ ಮತ್ತು ಅವರ ಕುಟುಂಬಕ್ಕೆ ಪಕ್ಷ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಇದನ್ನು ನನ್ನ ಕಿರಿಯ ಸಹೋದರನಂತಿರುವ ಶರತ್ ಅವರು ಚಿಂತಿಸಬೇಕಿದೆ. ಇಂದು ವೈಯಕ್ತಿಕ ಹಿನ್ನೆಲೆಯಲ್ಲಿ ಮಾಡಿದಂತಹ ತೀರ್ಮಾನ ಇರಬಾರದು. ಮುಂದಿನ 40 ವರ್ಷಗಳ ರಾಜಕೀಯ ಬದುಕಿನ ಬಗ್ಗೆಯೂ ಯೋಚನೆ ಮಾಡಬೇಕು. ಅವರು ಪಕ್ಷದ ನಿರ್ಧಾರ ಒಪ್ಪಬೇಕು ಎಂದು ಹಿರಿಯನಾಗಿ ಸಲಹೆ ನೀಡುತ್ತೇನೆ ಎಂದರು. ಇದನ್ನು ಓದಿ: ಆಪರೇಷನ್ ಸಕ್ಸಸ್ – ‘ಕೈ’ ಹಿಡಿದು ನಾನು ಚಿಕ್ಕಮಗುವಲ್ಲ, ಸ್ಪರ್ಧಿಸುತ್ತೇನೆ ಎಂದ ರಾಜು ಕಾಗೆ
ನಮ್ಮ ಸರ್ಕಾರ ಬಂದು 100 ದಿನಗಳು ಮಾತ್ರ ಆಗಿದ್ದು, ಪೂರ್ಣ ಬಹುಮತ ಪಡೆದು ನಾವು ಅಧಿಕಾರಕ್ಕೆ ಬಂದಿಲ್ಲ. ಆದ್ದರಿಂದ ಪ್ರಣಾಳಿಕೆಯಲ್ಲಿ ನಾವು ನೀಡಿರುವ ಮಾತನ್ನು ಈಡೇರಿಸಲೇಬೇಕು. ಇದರಲ್ಲಿ ಯಾವುದೇ ಬದಲಾವಣೆ ಆಗಲ್ಲ. ಎಸಿಬಿ ವಿಚಾರವನ್ನೂ ನಾವು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.