ಏಕದಿನದಲ್ಲಿ ಕೊಹ್ಲಿ ದಾಖಲೆ ಮುರಿದ ಸ್ಮೃತಿ ಮಂಧಾನ

Public TV
2 Min Read
Smriti Mandhana kohli

ಆ್ಯಂಟಿಗುವಾ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಸ್ಮೃತಿ ಮಂಧಾನ ಅವರು ಏಕದಿನ ಕ್ರಿಕೆಟಿನಲ್ಲಿ 2 ಸಾವಿರ ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿಯವರ ದಾಖಲೆಯನ್ನು ಮುರಿದಿದ್ದಾರೆ.

ಪ್ರಸ್ತುತ ಭಾರತದ ಮಹಿಳಾ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, 2-1 ಅಂತರದಲ್ಲಿ ಏಕದಿನ ಸರಣಿಯನ್ನು ಗೆದ್ದುಗೊಂಡಿದೆ. ಕಾಲಿನ ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಗೆ ಉಳಿದಿದ್ದ ಮಂಧಾನ ಎರಡನೇ ಪಂದ್ಯದಲ್ಲಿ ಕಮ್‍ಬ್ಯಾಕ್ ಮಾಡಿದ್ದರು.

Smriti Mandhana 2

ಬುಧವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಮಂಧಾನ, 63 ಎಸೆತದಲ್ಲಿ 74 ರನ್ (9 ಬೌಂಡರಿ, 3 ಸಿಕ್ಸ್) ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ನೀಡಿದ 194 ರನ್‍ಗಳ ಗುರಿಯನ್ನು ಭಾರತ ಸುಲಭವಾಗಿ ಬೆನ್ನಟ್ಟಿ ಗೆಲವು ಸಾಧಿಸಿತು. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಮಂಧಾನ ಕೊಹ್ಲಿ ಮಾಡಿದ ವೇಗದ 2000 ರನ್ ದಾಖಲೆಯನ್ನು ಮುರಿದು ಹಾಕಿದ್ದಾರೆ.

ಕೊಹ್ಲಿ ತಾನು ಆಡಿದ 53 ಇನ್ನಿಂಗ್ಸ್ ನಲ್ಲಿ 2 ಸಾವಿರ ರನ್‍ಗಳ ಗಡಿ ದಾಟಿದ್ದರೆ ಮಂಧಾನ ಅವರು ಕೇವಲ 51 ಇನ್ನಿಂಗ್ಸ್ 43.08 ರ ಸರಾಸರಿಯಲ್ಲಿ 2025 ರನ್ ಹೊಡೆದು ಕೊಹ್ಲಿ ಅವರ ಈ ದಾಖಲೆಯನ್ನು ಮುರಿದು ಹಾಕಿದ್ದಾರೆ. ಭಾರತದ ಪರ ಪುರುಷರ ಪೈಕಿ 48 ಇನ್ನಿಂಗ್ಸ್ ನಲ್ಲಿ 2 ಸಾವಿರ ರನ್ ಗಡಿ ದಾಟುವ ಮೂಲಕ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ 52 ಇನ್ನಿಂಗ್ಸ್ ನಲ್ಲಿ 2000 ರನ್ ಹೊಡೆದಿದ್ದರು.

Kohli 1

ಮಂಧಾನ ಈವರೆಗೆ 51 ಏಕದಿನ ಪಂದ್ಯಗಳಲ್ಲಿ 43.08 ಸರಾಸರಿಯಲ್ಲಿ 2,025 ರನ್ ಗಳಿಸಿದ್ದಾರೆ. ತನ್ನ ಏಕದಿನ ವೃತ್ತಿಜೀವನದಲ್ಲಿ ಇಲ್ಲಿವರೆಗೆ ನಾಲ್ಕು ಶತಕಗಳು ಮತ್ತು 17 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಮತ್ತು ಮೆಗ್ ಲ್ಯಾನಿಂಗ್ ನಂತರ ವೇಗವಾಗಿ 2000 ಏಕದಿನ ರನ್ ಗಳಿಸಿದ ಮೂರನೇ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದರ ಜೊತೆಗೆ ಇನ್ನೊಂದು ದಾಖಲೆ ಮಾಡಿರುವ ಸ್ಮೃತಿ ಮಂಧಾನ, ಚೇಸಿಂಗ್ ವೇಳೆ ಏಕದಿನ ಪಂದ್ಯದಲ್ಲಿ 9 ಅರ್ಧ ಶತಕ ಸಿಡಿಸಿದ್ದ ನ್ಯೂಜಿಲೆಂಡ್ ಆಟಗಾರ್ತಿ ಸುಜಿ ಬೇಟ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕಳೆದ 9 ಇನ್ನಿಂಗ್ಸ್ ನಲ್ಲಿ ಮಂಧಾನ 663 ರನ್ ಸಿಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *