ಕಾಂಗ್ರೆಸ್ಸಿಗೆ ಬಿಎಸ್‍ವೈ ಆಡಿಯೋ ಅಸ್ತ್ರ – ಸುಪ್ರೀಂನಲ್ಲಿ ಏನಾಗಬಹುದು?

Public TV
4 Min Read
yeddyurappa bsy serious thinking

ಬೆಂಗಳೂರು: ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಮುಗಿದಿದ್ದು, ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಈ ಹೊತ್ತಲ್ಲೇ ಹುಬ್ಬಳ್ಳಿ ಸಭೆಯಲ್ಲಿ ಸಿಎಂ ಯಡಿಯೂರಪ್ಪನವರು ಮಾತನಾಡಿರುವ ಆಡಿಯೋ ಈಗ ಕಾಂಗ್ರೆಸ್‍ಗೆ ಬಹುದೊಡ್ಡ ಅಸ್ತ್ರ ಸಿಕ್ಕಂತಾಗಿದೆ.

ಅನರ್ಹರನ್ನು ರಾಷ್ಟ್ರೀಯ ಅಧ್ಯಕ್ಷರು ಮುಂಬೈನಲ್ಲಿ ಇರಿಸಿದ್ದು ನಿಮಗೆಲ್ಲಾ ಗೊತ್ತಿಲ್ಲವೇ ಎಂದು ಪ್ರಶ್ನಿಸಿ ಅನರ್ಹ ಶಾಸಕರ ವಿರುದ್ಧ ಮಾತನಾಡಿದ್ದ ನಾಯಕರ ವಿರುದ್ಧ ಬಿಎಸ್‍ವೈ ಕೆಂಡಕಾರಿದ್ದರು. ಈ ಆಡಿಯೋವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾನೂನು ಸಮರಕ್ಕೆ ಮುಂದಾಗಿದೆ.

ಮೊದಲ ಹಂತವಾಗಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ. ರಾಜ್ಯಪಾಲರಿಗೆ ದೂರು ಸಲ್ಲಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯವರ ಕುತಂತ್ರ ಬಯಲಾಗಿದೆ. 10ನೇ ಶೆಡ್ಯೂಲ್ ಪ್ರಕಾರ ಅನರ್ಹರ ಮೇಲೆ ಕ್ರಮವಾಗಬೇಕು. ಆಪರೇಷನ್ ಕಮಲಕ್ಕೆ ಮುಂದಾಗಿರುವ ಅಮಿತ್ ಶಾ ಹಾಗೂ ಸಿಎಂ ವಿರುದ್ಧ ಕ್ರಮವಾಗಬೇಕು. ಈ ಬಗ್ಗೆ ರಾಷ್ಟ್ರಪತಿಗಳಿಗೆ ಮನವಿ ಕಳಿಸುವಂತೆ ಕೋರಲಾಗಿದೆ ಅಂತ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಕೃತ್ಯದಿಂದ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾಗಲಿದೆ ಎಂದು ಕಿಡಿಕಾರಿದರು. ಆದರೆ ಬಿಜೆಪಿಗರು ಮಾತ್ರ ಬಿಎಸ್‍ವೈ ಬೆಂಬಲಕ್ಕೆ ಬಂದಿದ್ದಾರೆ. ಯಡಿಯೂರಪ್ಪ ಅವರು ಹಾಗೆ ಹೇಳಿಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜಾರಿಕೊಂಡರೆ, ಡಿಸಿಎಂ ಅಶ್ವಥ್ ನಾರಾಯಣ ಮಾತ್ರ ಅದು ಸಿಎಂ ಯಡಿಯೂರಪ್ಪ ಅವರ ಧ್ವನಿಯಾ ಅಂತ ಗೊತ್ತಿಲ್ಲ. ಯಾರೋ ರೆಕಾರ್ಡ್ ಮಾಡಿದ್ದಕ್ಕೆ ಹೆಚ್ಚು ಒತ್ತು ನೀಡಬಾರದು ಅಂದಿದ್ದಾರೆ. ಆದರೆ ಸೋಮಣ್ಣ ಮಾತ್ರ ಅನರ್ಹರಿಂದಲೇ ಯಡಿಯೂರಪ್ಪ ಸಿಎಂ ಆಗಿದ್ದು. ರೆಕಾರ್ಡ್ ಮಾಡಿ ವೈರಲ್ ಮಾಡಿರುವುದು ನೋವು ತಂದಿದೆ. ಈ ಪ್ರಕರಣವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತದೆ ಎಂದಿದ್ದಾರೆ.

rebel final 3

 

ಯಡಿಯೂರಪ್ಪನವರು ಆಡಿಯೋದಲ್ಲಿ ಹೇಳಿದ್ದನ್ನು ಸಾಕ್ಷ್ಯವನ್ನಾಗಿ ಪರಿಗಣಿಸುವಂತೆ ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈಗಾಗಲೇ ಅ.25 ರಂದು ನ್ಯಾ. ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದೆ.

ಸುಪ್ರೀಂನಲ್ಲಿ ಏನಾಗಬಹುದು?
ನ್ಯಾ. ಎನ್.ವಿ. ರಮಣ ಪೀಠಕ್ಕೆ ಸೋಮವಾರ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಅರ್ಜಿಯಲ್ಲಿ ಮಹತ್ವದ ದಾಖಲೆ ಸಿಕ್ಕಿದ್ದು ತೀರ್ಪಿಗೆ ತಡೆ ನೀಡಬೇಕು. ಮತ್ತಷ್ಟು ವಾದಕ್ಕೆ ಕೋರ್ಟ್ ಅನುಮತಿ ನೀಡಬೇಕು ಎಂದು ಮನವಿ ಮಾಡುವ ಸಾಧ್ಯತೆಯಿದೆ. ಆದರೆ ಈಗಾಗಲೇ ವಿಚಾರಣೆ ಮುಗಿದಿರುವ ಕಾರಣ ವಾದಕ್ಕೆ ಅವಕಾಶ ನೀಡುವುದು ಅನುಮಾನ. ಲಿಖಿತ ರೂಪದಲ್ಲಿ ಹೆಚ್ಚುವರಿ ದಾಖಲೆ ನೀಡಲು ಕೋರ್ಟ್ ಸೂಚಿಸಬಹುದು. ಒಂದು ವೇಳೆ ಕಾಂಗ್ರೆಸ್ ಅರ್ಜಿಯನ್ನು ಪರಿಗಣಿಸಿ ಅವಕಾಶ ನೀಡಿದರೆ ವಿಚಾರಣೆಗೆ ಮತ್ತೊಂದು ದಿನಾಂಕ ನಿಗದಿಯಾಗಬಹುದು. ನಿಗದಿಯಾದರೆ ಅನರ್ಹರ ತೀರ್ಪು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಅನರ್ಹರನ್ನ ಮುಂಬೈನಲ್ಲಿಟ್ಟಿದ್ದು ಶಾ..ಆಪರೇಷನ್ ಕಮಲದ ಹೆಸರಿನಲ್ಲಿ ಸಂವಿಧಾನದ ಕಗ್ಗೊಲೆ

Supreme Court of India

ಯಡಿಯೂರಪ್ಪ ಆಡಿಯೋ ಬಗ್ಗೆ ಕಾಂಗ್ರೆಸ್ ದೂರು ಕೊಟ್ಟಿದ್ದರೆ ಆಡಿಯೋ ನನ್ನದೆ ಎಂದು ಸಿಎಂ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ 100 ದಿನ ತುಂಬಿದ ಹೊತ್ತಲ್ಲಿ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಅನರ್ಹರನ್ನು ಕೈಬಿಡೋದಿಲ್ಲ ಅಂತ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ನವೆಂಬರ್ 5ರ ನಂತರ ತೀರ್ಪು ಹೊರಬಿದ್ದ ಬಳಿಕ ಎಲ್ಲವನ್ನೂ ಮಾತನಾಡುತ್ತೇನೆ. ಟಿಕೆಟ್ ಕೊಡುವ-ಬಿಡುವ ವಿಚಾರ ಹೈಕಮಾಂಡ್‍ಗೆ ಬಿಟ್ಟದ್ದು ಎಂದು ಹೇಳಿದ್ದಾರೆ.

ಆಡಿಯೋದಲ್ಲಿ ಬಿಎಸ್‍ವೈ ಹೇಳಿದ್ದೇನು?
ಯಾಕೋ ಇವತ್ತು ನೀವು ಮಾತಾಡಿದಂತ ಧಾಟಿ ಸರ್ಕಾರ ಉಳಿಸೋಕೆ ಇದೆ ಅಂತ ಅನ್ನಿಸುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಮುಂದೆ ನಿಂತು 17 ಜನರು 2-3 ತಿಂಗಳು ಮುಂಬೈಯಲ್ಲಿರಿಸಿದ್ದರು. ಅವರೆಲ್ಲರೂ ಕ್ಷೇತ್ರಕ್ಕೂ ಬರಲಿಲ್ಲ. ಹೆಂಡ್ತಿ ಮಕ್ಕಳ ಮುಖ ನೋಡಿರಲಿಲ್ಲ. 3-4 ವರ್ಷ ವಿಪಕ್ಷದಲ್ಲಿ ಇರಬೇಕಾದ ನಮ್ಮನ್ನ ಆಡಳಿತ ಪಕ್ಷಕ್ಕೆ ಬರುವಂತೆ ಮಾಡಿದರು. ನಿಮ್ಮ ಬಾಯಲ್ಲಿ ಅನರ್ಹ ಪರ ಗಟ್ಟಿಯಾಗಿ ನಿಂತುಕೊಳ್ತೇವೆ ಅನ್ನೋ ಮಾತು ಬರಲಿಲ್ಲ. ಇದನ್ನ ನಾನು ಖಂಡಿತಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಐ ಆಮ್ ಸಾರಿ. ನನಗೇನು ಸಿಎಂಗಿರಿ ಬೇಕಾಗಿರಲಿಲ್ಲ. ಈಗಾಗಲೇ 3-4 ಬಾರಿ ಸಿಎಂ ಆಗಿದ್ದೇನೆ. ದೊಡ್ಡತನ ಧಾರಾಳತನ, ವಾಸ್ತವ್ಯ ಸ್ಥಿತಿಯನ್ನ ತಿಳಿಯದೇ ನೀವು ಮಾತಾಡಿದ್ದೀರಾ ಗೋಕಾಕ್ ಬಗ್ಗೆ ನೀವೇಕೆ ಮಾತಾಡಿಲ್ಲ? ಅದರಲ್ಲಿ ಅಂತಹ ವಿಶೇಷ ಏನಿದೆ..? ಅವರನ್ನೆಲ್ಲಾ ನಂಬಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತು ನಾನು ಅಪರಾಧ ಮಾಡಿದ್ದೇನೆ ಅಂತ ಈಗ ಅನ್ನಿಸುತ್ತಿದೆ.

 

R.Ashok A

ಇಂತಹ ಎರಡೂ ಕ್ಷೇತ್ರದ ಬಗ್ಗೆ ಒನ್ ಸೈಡೆಡ್ ಮಾತಾಡಿದ್ರಲ್ಲ. ಐ ನೆವರ್ ಎಕ್ಸ್‍ಪೆಕ್ಟೆಡ್ ದಿಸ್ ಸಾರಿ. 4 ಗೋಡೆ ಮಧ್ಯೆ ಇರುವಂತೆ ಮಾಡಿದ್ರೆ ದೊಡ್ಡ ಉಪಕಾರ ಮಾಡಿದಂತಾಗುತ್ತೆ. ನಾನು ಇಲ್ಲಿ ಬಂದು ಅಪರಾಧ ಮಾಡಿದಂತಾಗಿದೆ, ಈ ಸಭೆಗೆ ನಾನು ಬರಬಾರದಿತ್ತು. ಸೋಲು ಗೆಲುವು ಬೇರೆ ವಿಚಾರ. ಆದರೆ ಒಬ್ಬರ ಬಾಯಲ್ಲೂ ಆ ಎಂಎಲ್‍ಎಗಳು ತ್ಯಾಗ ಮಾಡಿದ್ದಾರೆಂಬ ಮಾತು ಬರಲಿಲ್ಲ. ನಮ್ಮನ್ನು ನಂಬಿ ಮೂರ್ಖರಾಗಿದ್ದಾರೆ, ಹುಚ್ಚರಾಗಿದ್ದಾರೆ. ಅವರು ರಾಜೀನಾಮೆ ಕೊಟ್ಟಿದ್ದು ನಮ್ಮನ್ನ ನಂಬಿ. ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡುವ ಅವಶ್ಯಕತೆ ಅವರಿಗಿತ್ತಾ? ರಾಜೀನಾಮೆ ನೀಡಿ ಅವರು ಅಷ್ಟು ದಿನ ಮುಂಬೈನಲ್ಲಿದ್ದರು. ಅದು ನಮಗಾಗಿ ಅಲ್ಲವೇ? ಅವರು ರಾಜೀನಾಮೆ ನೀಡಿ ನಮ್ಮ ಸರ್ಕಾರ ತರುವ ಅವಶ್ಯಕತೆ ಅವರಿಗೇನಿತ್ತು? ಅವರಿಂದ ತಾನೇ ನಮ್ಮ ಸರ್ಕಾರ ಬಂದಿರುವುದು.

ಈ ಬಗ್ಗೆ ನಾವು ಯಾವುದೇ ಚರ್ಚೆ ಮಾಡಿಲ್ಲ. ಕಾರಣ ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣ ಇತ್ತು. ಪ್ರಕರಣದ ತೀರ್ಪು 4ನೇ ತಾರೀಖಿನ ನಂತರ ಬರಬಹುದು. ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಶೇ.99ರಷ್ಟು ಅವರು ಸ್ಪರ್ಧೆ ಮಾಡುವ ನಿರ್ಧಾರ ನಾವು ತಗೆದುಕೊಳ್ಳುತ್ತೇವೆಂದು ನಿರೀಕ್ಷೆ ಮಾಡುತ್ತೇವೆ. ಕೆಲವು ವಾಸ್ತವಿಕ ಸ್ಥಿತಿಯಿದೆ. ಗೆದ್ದು ಬರುವುದು ಕಷ್ಟವಿದೆ. ಅದರ ಇನ್ನೊಂದು ಮುಖ ಬೇರೆನೇ ಇದೆ. ಸ್ವಲ್ಪ ಯೋಚನೆ ಮಾಡಿ ನೋಡಿ ಯಡಿಯೂರಪ್ಪನವರೇ ಅಂದಿದ್ರೆ ನಾನು ಇಂದು ಮಾತನಾಡುತ್ತಿರಲಿಲ್ಲ. ಆದ್ರೆ ಪಕ್ಷದ ಹಿರಿಯರಿಂದ ಹಿಡಿದು ಕಿರಿಯರವರೆಗೂ ಯಾರೊಬ್ಬರು ಸಹ ನನ್ನ ಜೊತೆ ಚರ್ಚೆ ಮಾಡದಿರುವುದು ನನಗೆ ನೋವು ತಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *