– ಪಬ್ಲಿಕ್ ಟಿವಿ ಪಬ್ಲಿಕ್ ಹೀರೋಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
– ಪಬ್ಲಿಕ್ ಹೀರೋ ಶಿವಾಜಿ ಕಾಲಿಗೆ ನಮಸ್ಕರಿಸಿದ ತೇಜಸ್ವಿ ಸೂರ್ಯ
ಬೆಂಗಳೂರು: ಪಬ್ಲಿಕ್ ಟಿವಿ ಪಬ್ಲಿಕ್ ಹೀರೋಗಳಾದ ಶಿವಾಜಿ ಛತ್ರಪ್ಪ ಕಾಗಣಿಕರ್ ಹಾಗೂ ಸಾಲುಮರದ ವೀರಾಚಾರ್ಯ ಅವರಿಗೆ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 64 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ಪಬ್ಲಿಕ್ ಹೀರೋ ಶಿವಾಜಿ ಛತ್ರಪ್ಪ ಕಾಗಣಿಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದ ಅಣ್ಣಾ ಹಜಾರೆ ಪ್ರಶಸ್ತಿ ನೀಡಿ ಗೌರವಿಸಿದರು. ಇವರ ಸಮಾಜ ಸೇವೆ ಕುರಿತು ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಸಂಸದ ತೇಜಸ್ವಿ ಸೂರ್ಯ ಅವರು ಶಿವಾಜಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ನಾಡಗೀತೆಯ ಉಲ್ಲೇಖವೇ ರಾಜ್ಯೋತ್ಸವ ದಿನಾಚರಣೆಯ ಮುನ್ನುಡಿ. ತ್ಯಾಗ ಬಲಿದಾನದ ಪ್ರತಿಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ನಾಡಾಗಲಿ, ಬೀಡಾಗಲಿ ಕಟ್ಟುವುದು ತುಂಬಾ ಕಷ್ಟ. ಆದರೆ ಕೆಡುವುದು ತುಂಬಾ ಸುಲಭ. ಕಟ್ಟಿದವರು ಯಾವತ್ತು ಕೆಡುವಲು ಯತ್ನಿಸುವುದಿಲ್ಲ. ನಾಡು ನುಡಿಯ ಕುರಿತಾಗಿ ಸಾಧನೆ ಮಾಡಿದ ಎಲ್ಲರ ಬಗ್ಗೆ ನನಗೂ ನಮ್ಮ ಸರ್ಕಾರಕ್ಕೂ ಗೌರವವಿದೆ ಎಂದು ತಿಳಿಸಿದರು.
ಭಾಷೆ ಮತ್ತು ಸಂಸ್ಕೃತಿ ಎರಡು ಒಂದೇ. ಯಾರು ತಮ್ಮ ಮಾತೃ ಭಾಷೆಯನ್ನು ಕಳೆದುಕೊಳ್ಳುತ್ತಾರೋ ಅವರು ಕೇವಲ ಭಾಷೆಯನ್ನಷ್ಟೆ ಅಲ್ಲ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಾರೆ. ಜಾಗತಿಕ ಮಟ್ಟದಲ್ಲಿ ಮುನ್ನುಗ್ಗುತ್ತ ಭಾಷೆ ಕಳೆದು ಹೋಗುತ್ತಿದ್ದೇವೆ. ನಾವು ಬ್ರಿಟಿಷರು ಆಗುವುದಿಲ್ಲ. ಆದ್ದರಿಂದ ಭಾಷೆ ಉಳಿಸುವ ಸವಾಲನ್ನು ಸ್ವೀಕರಿಸಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 64 ಗಣ್ಯರಿಗೆ ಸನ್ಮಾನ ಮಾಡುವ ಸೌಭಾಗ್ಯ ನಮ್ಮದಾಗಿದೆ ಎಂದು ಹೇಳಿದರು.
ಸಿಎಂ ಯಡಿಯೂರಪ್ಪ ಮಾತನಾಡಿ, ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಥಳಾವಕಾಶ ಕಡಿಮೆಯಿದೆ. ಆದರೆ ಕಾರ್ಯಕ್ರಮಕ್ಕೆ ಸಾವಿರಾರು ಜನ ಬಂದು ನಿಂತಿದ್ದಾರೆ. ಮುಂದಿನ ವರ್ಷ ವಿಶಾಲವಾದ ಸ್ಥಳದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಲಹಾ ಸಮಿತಿಯ ಒಕ್ಕೋರಲ ಸಹಮತದೊಂದಿಗೆ ಕೆಲವು ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಯಾರು ನಿಜವಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭೂಷಣರಾಗಿದ್ದಾರೋ ಅವರಿಗೆ ಮುಂದಿನ ವರ್ಷ ಪ್ರಶಸ್ತಿ ಕೊಡಲಾಗುವುದು. ಕನ್ನಡವನ್ನು ನಾವು ಮರೆತರೆ ಸಂಸ್ಕ್ರತಿಯನ್ನ ಮರೆತಂತೆ. ಇಂಗ್ಲಿಷ್ ಸಂಬಂಳಕ್ಕಾದರೆ ಕನ್ನಡ ಉಂಬಳಕ್ಕೆ ಎನ್ನುವ ಮಾತಿದೆ. ಕನ್ನಡ ಸಂಬಂಳ ಹಾಗೂ ಉಬಂಳಕ್ಕೂ ಆಗಬೇಕು. ನಾಡು, ನುಡಿ, ಜಲದ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಸಿಎಂ ಯಡಿಯೂರಪ್ಪ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ 30 ನಿಮಿಷ ಬೇಗ ಆಗಮಿಸಿ ಸಂಗೀತ ಕಾರ್ಯಕ್ರಮ ವೀಕ್ಷಿಸಿದರು. ಬಳಿಕ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಉದಯ ಗರುಡಾಚಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ ಉಪಸ್ಥಿತರಿದ್ದರು.