ವೇದಿಕೆ ಮೇಲೆಯೇ ಭೀಮಾನಾಯ್ಕ್- ದೇವೇಂದ್ರಪ್ಪ ಮಧ್ಯೆ ವಾಕ್ಸಮರ

Public TV
2 Min Read
Bhima Nayak Devendrappa

– ಒಬ್ಬರನ್ನೊಬ್ಬರು ಬೈದಾಡಿಕೊಂಡ ನಾಯಕರು

ಬಳ್ಳಾರಿ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಹಾಗೂ ಬಿಜೆಪಿ ಸಂಸದ ದೇವೇಂದ್ರಪ್ಪ ಅವರು ಪರಸ್ಪರ ಬೈದಾಡಿಕೊಂಡ ಪ್ರಸಂಗ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಹಗರಿಬೊಮ್ಮನ ಹಳ್ಳಿ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ವೇದಿಕೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಮಾತನಾಡಿದ ಶಾಸಕ ಭೀಮಾನಾಯ್ಕ್, ಹಗರಿಬೊಮ್ಮನ ಹಳ್ಳಿ ಕ್ಷೇತ್ರಕ್ಕೆ ಬಂದಿದ್ದ ಅನುದಾನವನ್ನು ಬಿಜೆಪಿ ಸರ್ಕಾರವು ವಾಪಸ್ ಪಡೆಯಿತು ಎಂದರು. ಇದರಿಂದ ಆಕ್ರೋಶಗೊಂಡ ಸಂಸದರು, ಯಾವ ಕಾರ್ಯಕ್ರಮದಲ್ಲಿ ಏನು ಮಾತನಾಡಬೇಕು ಎನ್ನುವುದು ಗೊತ್ತಿಲ್ಲಾ ಎಂದು ಗುಡುಗಿದರು.

BLY A

ಇಲ್ಲಿ ರಾಜಕಾರಣ ಮಾಡುತ್ತಿಲ್ಲ. ಹಗರಿಬೊಮ್ಮನ ಹಳ್ಳಿ ಪುರಸಭೆಗೆ ಎರಡು ಕೋಟಿ ರೂ. ಕೊಟ್ಟಿದ್ದೇವೆ. ಅದರಲ್ಲಿ ಐದು ಪುತ್ಥಳಿ ಕೊಟ್ಟಿದ್ದೇವೆ. ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಹತ್ತು ಲಕ್ಷ ರೂ., ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಹತ್ತು ಲಕ್ಷ ರೂ., ವಾಲ್ಮೀಕಿ ಪುತ್ಥಳಿಗೆ ಹತ್ತು ಲಕ್ಷ ರೂ., ಕನಕದಾಸರ ಪುತ್ಥಳಿಗೆ ಹತ್ತು ಲಕ್ಷ ರೂ., ಒಟ್ಟು ನಾಲ್ವತ್ತು ಲಕ್ಷ ರೂ. ಅನುದಾನ ಕೊಟ್ಟಿದ್ದೇವೆ. ಆದರೆ ಸರ್ಕಾರ ಆ ಅನುದಾನವನ್ನು ಹಿಂದಕ್ಕೆ ಪಡೆದಿದೆ. ದಯಮಾಡಿ ಸನ್ಮಾನ್ಯ ಲೋಕಸಭಾ ಸದಸ್ಯರು ಅನುದಾನವನ್ನು ಮರಳಿಸಲಿ ಎಂದರು.

ಇದರಿಂದ ಮತ್ತಷ್ಟು ಕೋಪಗೊಂಡ ದೇವೇಂದ್ರಪ್ಪ ಅವರು, ಈ ಮಾತನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಕಿಡಿಕಾರಿದರು. ಆಗ ಭೀಮಾನಾಯ್ಕ್, ಲೋಕಸಭಾ ಸದಸ್ಯರು ತಾವು. ಸ್ವಲ್ಪ ತಾಳ್ಮೆಯಿಂದ ಕುಳಿತರೆ ಆ ವಿಚಾರವನ್ನೇ ಬಿಟ್ಟು ಬಿಡುತ್ತೇನೆ ಎಂದರು.  ದೇವೇಂದ್ರಪ್ಪ ಅವರು ಮಧ್ಯ ಪ್ರವೇಶಿಸಿ, ಆ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಿ ದಯಮಾಡಿ ಎಂದು ಕೇಳಿಕೊಂಡರು.

vlcsnap 2019 10 31 23h52m11s927

ಸಂಸದರ ಮನವಿಗೆ ಕ್ಯಾರೇ ಎನ್ನದ ಶಾಸಕರು ಮಾತು ಮುಂದುವರಿಸಿ, ನೀವು ರೈಲು ಬಿಟ್ಟಿದ್ದು ನೀವು ಎಂದು ಹೇಳುತ್ತೀರಾ. ಆದರೆ ಕೊಟ್ಟೂರು ಹರಿಹರ ರೈಲು ಬಿಟ್ಟಿದ್ದು ಕೇಂದ್ರ ಮಾಜಿ ಸಚಿವ ಜಾಫರ್ ಷರೀಷ್ ಮತ್ತು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಬಿಟ್ಟುದ್ದು. ಅದು ನೀವು ಬಿಟ್ಟಿದ್ದು ಅಲ್ಲಾ ಎಂದು ಛಾಟಿ ಬೀಸಿದರು.

ನಾಯಕರ ವಾಕ್ಸಮರದಿಂದಾಗಿ ಕೆಲ ಹೊತ್ತು ಕಾರ್ಯಕ್ರಮದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಕೆಲ ಸ್ಥಳೀಯ ಮುಖಂಡರು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *