ತಾಲೂಕಾಗಿ ಘೋಷಣೆ ಆಯ್ತು ಮಂಚೇನಹಳ್ಳಿ – ಬಿಎಸ್‍ವೈಗೆ ಅಭಿನಂದನೆ ತಿಳಿಸಿದ ಸುಧಾಕರ್

Public TV
2 Min Read
SUDHAKAR

ಬೆಂಗಳೂರು: ಹಲವು ವರ್ಷಗಳಿಂದ ಮಂಚೇನಹಳ್ಳಿ ಗ್ರಾಮವನ್ನು ತಾಲೂಕಾಗಿ ಘೋಷಣೆ ಮಾಡಿ ಎಂದು ಹೋರಾಡುತ್ತಿದ್ದ ಗೌರಿಬಿದನೂರು ತಾಲೂಕಿನ ಜನತೆ ಇಂದು ಜಯ ಸಿಕ್ಕಿದ್ದು, ಮಂಚೇನಹಳ್ಳಿನ್ನು ಹೊಸ ತಾಲೂಕಾಗಿ ಸರ್ಕಾರ ಘೋಷಣೆ ಮಾಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅತೀ ದೊಡ್ಡ ಹೋಬಳಿಯಾದ ಮಂಚೇನಹಳ್ಳಿಯನ್ನು ಪ್ರತ್ಯೇಕ ಒಂದು ತಾಲೂಕಾಗಿ ಘೋಷಣೆ ಮಾಡಬೇಕು ಎಂದು ಅಲ್ಲಿನ ಜನ ಹೋರಾಟ ಮಾಡುತ್ತಲೇ ಬಂದಿದ್ದರು. ಹಲವಾರು ಬಾರಿ ಸರ್ಕಾರಕ್ಕೆ ಬಿಸಿಮುಟ್ಟಿಸಲು ಬಂದ್‍ಗಳನ್ನು ಕೂಡ ಮಾಡಿದ್ದರು. ಈಗ ಆ ಜನರ ಹೋರಾಟಕ್ಕೆ ಜಯ ಸಿಕ್ಕಿದ್ದು, ಮಂಚೇನಹಳ್ಳಿಯನ್ನು ಬಿಎಸ್‍ವೈ ಸರ್ಕಾರ ಹೊಸ ತಾಲೂಕಾಗಿ ಘೋಷಣೆ ಮಾಡಿದೆ.

ಈಗ ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಅನರ್ಹ ಶಾಸಕ ಸುಧಾಕರ್ ಅವರು, ಮಂಚೇನಹಳ್ಳಿ ಜನರ ವನವಾಸ ಇಂದಿಗೆ ಕೊನೆಯಾಗಿದೆ. ಹಲವು ವರ್ಷಗಳ ಹೋರಾಟದ ಬೆನ್ನಲ್ಲೇ ಇಂದು ಮಂಚೇನಹಳ್ಳಿ ತಾಲೂಕು ಆಗಿ ಘೋಷಣೆಯಾಗಿದೆ. ನನ್ನ ಜನರಿಗೆ ನಾನು ನೀಡಿದ ಭರವಸೆ ಈಡೇರಿಸಿರುವ ನೆಮ್ಮದಿ ಇಂದು ನನಗಿದೆ ಎಂದು ಬರೆದುಕೊಂಡಿದ್ದಾರೆ.

ಇಂದು ನನಗೆ ದೀಪಾವಳಿ ಹಬ್ಬ, ವರ್ಷಗಳ ನಮ್ಮ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ನಮ್ಮ ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜು ಹಾಗೂ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿರುವ ಯಡಿಯೂರಪ್ಪ ಹಾಗೂ ರಾಜ್ಯ ಸಚಿವ ಸಂಪುಟಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹಾಗೂ ಹೊಸ ತಾಲೂಕಿಗಾಗಿ ಸುದೀರ್ಘಾವಧಿಯ ಹೋರಾಟ ನಡೆಸಿದ ನನ್ನ ಮಂಚೇನಹಳ್ಳಿಯ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಯಾಕೆ ಪ್ರತ್ಯೇಕ ತಾಲೂಕು?
ಮಂಚೇನಹಳ್ಳಿ ಗ್ರಾಮ ಗೌರಿಬಿದನೂರು ತಾಲೂಕಿನಲ್ಲೇ ಅತ್ಯಂತ ದೊಡ್ಡ ಹೋಬಳಿಯಾಗಿದ್ದು, 64 ಗ್ರಾಮಗಳನ್ನು ಒಳಗೊಂಡಿದೆ. ಸುಮಾರು 60 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ ಅಭಿವೃದ್ಧಿ ಈ ಹೋಬಳಿಯಲ್ಲಿ ಮರೀಚಿಕೆಯಾಗಿದೆ. ಹದಗೆಟ್ಟ ರಸ್ತೆಗಳು, ಒಳಚರಂಡಿ ಅವ್ಯವಸ್ಥೆ, ಶುಚಿತ್ವದ ಸಮಸ್ಯೆ, ಅವ್ಯವಸ್ಥೆ ತಾಣವಾಗಿರುವ ಬಸ್ ತಂಗುದಾಣ, ಆಸ್ಪತ್ರೆಯಲ್ಲಿ ಕನಿಷ್ಠ ಪ್ರಥಮ ಚಿಕಿತ್ಸೆಗೂ ಇಲ್ಲದ ಸೌಲಭ್ಯ. ಅತ್ತ ಗೌರಿಬಿದನೂರು ಇದ್ದರೂ ಚಿಕ್ಕಬಳ್ಳಾಪುರಕ್ಕೆ ಬರಲೇಬೇಕಾದ ಅನಿವಾರ್ಯತೆ. ಹೀಗೆ ಮಂಚೇನಹಳ್ಳಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಸದಾ ಕಾಡುವುದರಿಂದ ಇಲ್ಲಿನ ಜನ ಪ್ರತ್ಯೇಕ ತಾಲೂಕಿಗೆ ಆಗ್ರಹಿಸಿ ಸಮಿತಿ ರಚಿಸಿಕೊಂಡು ಹೋರಾಟ ಮಾಡುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *