ಚಿತ್ರದುರ್ಗ: ಕಾಯಿಲೆಗೆ ಚಿಕಿತ್ಸೆ ಕೊಡಿಸುವುದಾಗಿ ಸುಳ್ಳು ಹೇಳಿ ಹೆತ್ತ ತಾಯಿಯನ್ನು ಪಾಪಿ ಮಗಳು-ಅಳಿಯ ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದು, ವೃದ್ಧ ತಾಯಿ ಅನ್ನ, ನೀರಿಲ್ಲದೆ ಬೀದಿಗೆ ಬಿದ್ದಿರುವ ಮನಕಲಕುವ ಘಟನೆ ಕೋಟೆನಾಡಿನಲ್ಲಿ ನಡೆದಿದೆ.
ಕಾಯಿಲೆಯಿಂದ ಬಳಲುತ್ತಿರುವ ವೃದ್ಧೆ ಪಾಪಮ್ಮ ಅವರನ್ನು ಮಗಳು ಹಾಗೂ ಅಳಿಯ ಆಸ್ಪತ್ರೆಯಲ್ಲೇ ಬಿಟ್ಟು ಕೈತೊಳೆದುಕೊಂಡಿದ್ದಾರೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೋರೊಪ್ಪನಹಟ್ಟಿ ಗ್ರಾಮದ ನಿವಾಸಿಯಾಗಿರುವ ಪಾಪಮ್ಮ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ನೆಪವನ್ನು ಇಟ್ಟುಕೊಂಡು ನಿಮ್ಮ ಕಾಯಿಲೆಗೆ ಚಿಕಿತ್ಸೆ ಕೊಡಿಸುತ್ತೇವೆ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಸುಳ್ಳು ಹೇಳಿ ಪಾಪಮ್ಮ ಅವರನ್ನು ಮಗಳು ಮತ್ತು ಅಳಿಯ ನಂಬಿಸಿದ್ದರು. ಇದನ್ನೂ ಓದಿ:ಚಳ್ಳಕೆರೆ ತಾಲೂಕಾಸ್ಪತ್ರೆಯಲ್ಲಿ ಡಾ. ಕಸ ಗುಡಿಸಮ್ಮ – ಡಿ ಗ್ರೂಪ್ ಉದ್ಯೋಗಿ ನೀಡ್ತಾರೆ ಮೆಡಿಸಿನ್
ಮಗಳು, ಅಳಿಯನನ್ನು ನಂಬಿ ಪಾಪಮ್ಮ ಅವರ ಜೊತೆಗೆ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ತೆರಳಿದ್ದರು. ಆದರೆ ಮಗಳು ಮತ್ತು ಅಳಿಯ ತಾಯಿಯನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಇತ್ತ ಆಸ್ಪತ್ರೆ ಸಿಬ್ಬಂದಿ ಕೂಡ ವೃದ್ಧೆಗೆ ಚಿಕಿತ್ಸೆ ಕೊಡದೆ ನಿರ್ಲಕ್ಷ್ಯಿಸಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.
ಅಷ್ಟೇ ಅಲ್ಲದೆ ಆಸ್ಪತ್ರೆ ಆವರಣದಲ್ಲಿಯೇ ಪಾಪಮ್ಮ ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಮಲಗಿದ್ದರೂ ಆಸ್ಪತ್ರೆ ಸಿಬ್ಬಂದಿ ಕ್ಯಾರೆ ಎಂದಿಲ್ಲ. ಇತ್ತ ಮಗಳು ಮತ್ತು ಅಳಿಯ ಕೂಡ ಪಾಪಮ್ಮ ಅವರನ್ನು ಕರೆದುಕೊಂಡು ಹೋಗಲು ಬರುತ್ತಿಲ್ಲ. ಅತ್ತ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ವೃದ್ಧ ತಾಯಿಗೆ ಯಾರ ಆಸರೆಯೂ ಇಲ್ಲದಂತಾಗಿದ್ದು, ಆಸ್ಪತ್ರೆ ಆವರಣದಲ್ಲಿಯೇ ಆಹಾರ, ನೀರಿಲ್ಲದೆ ನಿತ್ರಾಣ ಸ್ಥಿತಿಗೆ ತಲುಪಿದ್ದಾರೆ. ಇದನ್ನು ಗಮಿನಿಸಿದ ಸಾರ್ವಜನಿಕರು ವೃದ್ಧೆಯ ಮಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.