ದಾವಣಗೆರೆ: ಕಳೆದ ಕೆಲ ದಿನಗಳಿಂದ ದಾವಣಗೆರೆಯಲ್ಲಿ ಭಾರೀ ಮಳೆಯಾಗುತ್ತಿದೆ. ಸೂಳೆಕೆರೆ ಹಳ್ಳದ ನೀರಿನ ರಭಸಕ್ಕೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿದೆ.
ಮಳೆಯಿಂದಾಗಿ ಸೂಳೆಕೆರೆ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋದ ಪರಿಣಾಮ ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮಗಳ ಮಧ್ಯೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ರಾಮತೀರ್ಥ, ನಾಗೇನಹಳ್ಳಿ, ರಾಯಾಪುರ, ಭಾನುವಳ್ಳಿ ಗ್ರಾಮಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಪರದಾಡುತ್ತಿದ್ದಾರೆ. ಇದನ್ನೂ ಓದಿ:ಮಲಪ್ರಭಾ, ಬೆಣ್ಣೆಹಳ್ಳ ಪ್ರವಾಹದ ಅಬ್ಬರಕ್ಕೆ ರಸ್ತೆಗಳು ಛಿದ್ರ ಛಿದ್ರ
ಸಂಪರ್ಕ ಸೇತುವೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಬೆಳ್ಳೂಡಿಗೆ ಹಾಗೂ ಹರಿಹರ ಸಂಪರ್ಕಿಸಲು ಜನರು 11 ಕಿ.ಮಿ ಸುತ್ತಿಬಳಸಿ ಪ್ರಯಾಣ ಮಾಡಬೇಕಿದೆ. ಅವೈಜ್ಞಾನಿಕವಾಗಿ ರಸ್ತೆ, ಚೆಕ್‍ಡ್ಯಾಂ ನಿರ್ಮಿಸಿದ ಪರಿಣಾಮ ರಸ್ತೆ ಕೊಚ್ಚಿಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಗೆಯೇ ಈ ಭಾಗದಲ್ಲಿ ಮಳೆ ಕಡಿಮೆಯಾದರೂ ನೀರಿನ ಹರಿವು ಮಾತ್ರ ಇಳಿಮುಖವಾಗಿಲ್ಲ.