– ಈ ದೇಹ ಮಣ್ಣಿಗೆ, ಪ್ರಾಣ ಡಿಕೆಶಿ ಅಣ್ಣನಿಗೆ
– ಅಭಿಮಾನಿಯ ವಿಡಿಯೋ ವೈರಲ್
ರಾಮನಗರ: ಮಾಜಿ ಸಚಿವ, ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವವರೆಗೂ ನಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಡಿಕೆಶಿ ಅಭಿಮಾನಿಯೊಬ್ಬ ಶಪಥ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಜಿ ಸಚಿವರ ಅಭಿಮಾನಿ ರಿಜ್ವಾನ್ ಪಾಷಾ, ತಮ್ಮ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಒತ್ತಾಯಿಸಿದ್ದಾರೆ. ಸೆಲ್ಫಿ ವಿಡಿಯೋ ಮೂಲಕ ಪಾಷಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ದೇಹ ಮಣ್ಣಿಗೆ, ಪ್ರಾಣ ಡಿಕೆಶಿ ಅಣ್ಣನಿಗೆ. ಅಣ್ಣ ಸಿಎಂ ಅಗುವವರೆಗೆ ನಾನು ಮದುವೆ ಆಗುವುದಿಲ್ಲ. ಡಿಕೆ ಸಾಹೇಬರು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ನಂತರ ಮದುವೆ ಮಾಡಿಕೊಳ್ಳುವ ಪ್ರತಿಜ್ಞೆ ಮಾಡಿದ್ದಾರೆ.
ನೆಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ಅವರು ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಲವಾರು ಮಂದಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಅನೇಕರು ಹರಕೆ ಹೊತ್ತು ಅಭಿಮಾನ ತೋರಿಸಿದ್ದರು. ಆದರೆ ರಿಜ್ವಾನ್ ಪಾಷಾ, ಒಂದು ಹೆಜ್ಜೆ ಮುಂದೆ ಹೋಗಿ ಡಿಕೆ ಶಿವಕುಮಾರ್ ಅವರು ಸಿಎಂ ಆಗುವವರೆಗೂ ಮದುವೆ ಆಗುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.
ರಿಜ್ವಾನ್ ಪಾಷಾ ಕನಕಪುರ ನಗರದ ಮೇಳೆಕೋಟೆಯ ನಿವಾಸಿಯಾಗಿದ್ದು, ಡಿ.ಕೆ.ಶಿವಕುಮಾರ್ ಅವರ ಅಪ್ಪಟ ಅಭಿಮಾನಿ. ಈ ಹಿಂದೆ ಡಿಕೆ ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯ(ಇಡಿ)ದ ವಿಚಾರಣೆ ವೇಳೆ ಜೈಲು ಸೇರಿದ್ದಾಗ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಕನಕಪುರದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಿಜ್ವಾನ್ ಪಾಷಾ ತಲೆ ಬೋಳಿಸಿಕೊಂಡು ಹುಚ್ಚು ಅಭಿಮಾನ ಮೆರೆದಿದ್ದರು.