ದೀಪಾವಳಿಗೆ ದೀಪಗಳ ಅಲಂಕಾರ ಹೇಗಿರಬೇಕು? ಏನೆಲ್ಲ ಎಚ್ಚರಿಕೆ ವಹಿಸಿಕೊಳ್ಳಬೇಕು?

Public TV
3 Min Read
DEEPAVALI 1

ಬೆಂಗಳೂರು: ದೀಪಾವಳಿ ಹಬ್ಬ ಬಂತು ಅಂದ್ರೆ ಸಾಕು ಹೆಣ್ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಮಕ್ಕಳಿಗೆ ಪಟಾಕಿ ಹಚ್ಚೋ ಆತುರ. ಹೆಣ್ಮಕ್ಕಳಿಗೆ ಮನೆಯನ್ನು ಸಿಂಗಾರ ಮಾಡುವುದೇ ಒಂದು ದೊಡ್ಡ ಕೆಲಸವಾಗಿ ಬಿಟ್ಟಿರುತ್ತದೆ. ಈ ಬಾರಿ ಯಾವ ರೀತಿಯ ದೀಪ ಹಚ್ಚಬೇಕು. ಮಾರ್ಕೆಟ್‍ನಲ್ಲಿ ಯಾವ ರೀತಿಯ ದೀಪ ಹೊಸದಾಗಿ ಬಂದಿದೆ. ಎಲ್ಲರಿಗಿಂತ ಮುಂಚೆ ನಾನೇ ಹೋಗಿ ತರಬೇಕು. ಸ್ನೇಹಿತೆಯರಿಗೆಲ್ಲಾ ನಾನು ಹೊಸ ದೀಪ ತೋರಿಸಿ ಬೀಗಬೇಕು ಅಂತೆಲ್ಲಾ ಹೆಣ್ಮಕ್ಕಳು ಆಸೆ ಇಟ್ಟುಕೊಂಡಿರುತ್ತಾರೆ. ಅದಕ್ಕೆ ಸಿದ್ಧತೆಯನ್ನೂ ಹೆಚ್ಚಾಗಿ ಮಾಡಿಕೊಳ್ಳುತ್ತಿರುತ್ತಾರೆ.

DEEPAVALI 9

ಈಗಂತೂ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಣ್ಣಿನ ದೀಪ, ಬಣ್ಣದ ದೀಪಗಳು, ಕುಂದನ್ ಅಲಂಕೃತ ದೀಪಗಳು, ಹಿತ್ತಾಳೆ ದೀಪಗಳು, ವಿದ್ಯುತ್ ಅಲಂಕಾರಗೊಂಡ ದೀಪಗಳು, ಸ್ಟೆಪ್ ದೀಪಗಳು, ಸೆಟ್ ದೀಪಗಳು, ರೆಡಿಮೇಡ್ ದೀಪಗಳು, ಪಿಂಗಾಣಿ ದೀಪ, ಗಾಜಿನ ದೀಪ, ಮೇಣದ ದೀಪಗಳು, ಸೆಂಟೆಂಡ್ ದೀಪಗಳು, ಬಲ್ಬ್‍ಗೆ ಅಳವಡಿಸುವಂತಹ ಲಾಂಟೀನ್‍ಗಳು ಲಗ್ಗೆ ಇಟ್ಟಿವೆ. ಇದರಲ್ಲಿ ಯಾವುದನ್ನು ಆಯ್ಕೆ ಮಾಡಿ ಮನೆಗೆ ತರಬೇಕು. ಹೇಗೆ ಅಲಂಕಾರ ಮಾಡಬೇಕು ಎಂಬುದೇ ಟೆನ್ಷನ್ ಆಗಿರುತ್ತದೆ.

DEEPAVALI 5

ಹಿಂದಿನ ಕಾಲದಲ್ಲಿ ಮನೆಯ ಮುಂಭಾಗ ಜಗಲಿ ಅಂತ ಇರುತಿತ್ತು. ಆ ಜಗಲಿಗೆ ಅಂಟಿಕೊಂಡ ಗೋಡೆಯಲ್ಲೊಂದು ಪುಟ್ಟದಾದ ಗೂಡು. ತ್ರಿಕೋನಾಕೃತಿಯ ಈ ಗೂಡಿನಲ್ಲಿ ಮಣ್ಣಿನ ಹಣತೆಯನ್ನು ಹಚ್ಚಿಟ್ಟರೆ ಅದರ ಸೊಬಗನ್ನು ನೋಡುವುದು ಒಂದು ಚಂದವಾಗಿರುತ್ತಿತ್ತು. ಆ ಗೂಡಿಗೆ ಗೋಮೂತ್ರ ಸಿಂಪಡಿಸಿ ಶುಚಿಗೊಳಿಸಿ, ಸಗಣಿ ಸಾರಿಸಿ, ಸಗಣಿಯನ್ನು ಉಂಡೆ ಮಾಡಿ ಅದರ ಮೇಲೆ ಅರಿಶಿನ ಕುಂಕುಮ ಹಚ್ಚಿದ ಮಣ್ಣಿನ ಹಣತೆ ಹಚ್ಚಿದರೆ ಶಾಂತವಾದ ಗಾಳಿ ಒಮ್ಮೆ ತೇಲಿ ಬಂದಾಗ ಆ ಹಣತೆಯಲ್ಲಿನ ಜ್ಯೋತಿ ಅತ್ತಿಂದಿತ್ತ, ಇತ್ತಿಂದತ್ತ ಬಳುಕುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ಇದನ್ನೂ ಓದಿ: ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

DEEPAVALI 10

ಕಾಲ ಕಳೆದಂತೆ ವರ್ಷದಿಂದ ವರ್ಷಕ್ಕೆ ದೀಪಾವಳಿಯಿಂದ ಮತ್ತೊಂದು ದೀಪಾವಳಿಗೆ ಹಬ್ಬದ ಆಚರಣೆ ಬದಲಾಗುತ್ತಿದೆ. ಯುವ ಜನಾಂಗ ಹೊಸತನ್ನು ಹುಡುಕುವುದರಲ್ಲೇ ನಿರತವಾಗಿದೆ. ಕುಂಬಾರಣ್ಣ ಮಾಡಿ, ಸುಟ್ಟು ತಯಾರಿಸುವ ದೀಪ ಈಗಲೂ ಅಲ್ಲಲ್ಲಿ ಸಿಗುತ್ತದೆ. ಆದರೆ ಈಗಿನ ಆಧುನಿಕ ದೀಪಗಳ ಮುಂದೆ ಸ್ವಲ್ಪ ಮಂಕಾಗಿದೆ. ಆದರೂ ಮನೆಯ ಹಿರಿಯರು, ಸಂಪ್ರದಾಯಸ್ಥರು ಮಣ್ಣಿನ ದೀಪವನ್ನೇ ಹುಡುಕುತ್ತಾರೆ. ಇದನ್ನೂ ಓದಿ: ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

DEEPAVALI 6

ದೀಪಗಳ ಅಲಂಕಾರ ಹೇಗಿರಬೇಕು?
ದೀಪಾವಳಿ ಹಬ್ಬದ ವೇಳೆ ಮನೆಯಲ್ಲಿ ಬೆಳಕು ತುಂಬಿರಬೇಕು. ಈಗಂತೂ ಸಾಮಾನ್ಯವಾಗಿ ಮಹಿಳೆಯರು ಕೆಲಸ ಹೋಗುತ್ತಾರೆ. ಕೆಲಸ ಮುಗಿಸಿಕೊಂಡು ಬಂದ ಬಳಿಕ ಹಬ್ಬ ಮಾಡುವುದು ಸ್ವಲ್ಪ ಕಷ್ಟ. ಹೀಗಾಗಿ ರೆಡಿಮೇಡ್ ದೀಪಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಮಣ್ಣಿನ ದೀಪಕ್ಕೆ ಸಗಣಿ ತಂದು ಇಡುವಷ್ಟು ತಾಳ್ಮೆಯಂತೂ ಇಲ್ಲವೇ ಇಲ್ಲ. ಇಷ್ಟಕ್ಕೂ ಈ ಆಧುನಿಕ ಬೆಂಗಳೂರಲ್ಲಿ ಸಗಣಿ ಹುಡುವುದು ಎಲ್ಲಿ? ಹೀಗಾಗಿ ಪಿಂಗಾಣಿ, ದೀಪಗಳು, ವಿದ್ಯುತ್ ದೀಪಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ತಾರೆ. ದೀಪಗಳು ನೋಡಿದ ತಕ್ಷಣ ತನ್ನತ್ತ ಸೆಳೆಯುವಂತಿರಬೇಕು. ದೀಪದ ಬೆಳಕಲ್ಲಿ ನಮ್ಮ ಕಷ್ಟದ ಕತ್ತಲೆಯನ್ನು ಮರೆಯುಂವತಿರಬೇಕು. ದೀಪದ ಬೆಳಕು ಬದುಕಿನಲ್ಲಿ ಹೊಸ ಬೆಳಕು ಮೂಡಿಸುವಂತಿರಬೇಕು. ಹಾಗಾಗಿ, ದೀಪಗಳನ್ನು ಜೋಡಿಸುವಾಗ ಜಾಣ್ಮೆಯಿಂದ ಜೋಡಿಸಬೇಕು. ಚಿಕ್ಕದಾಗಿ ಚೊಕ್ಕದಾಗಿ, ಸಿಂಪಲ್ ಆಗಿ ಜೋಡಿಸಬೇಕು.  ಇದನ್ನೂ ಓದಿ: ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

DEEPAVALI 7

ಎಲ್ಲೆಲ್ಲಿ ಇಡಬಹುದು?
ಮನೆಯ ಹೊಸ್ತಿಲು, ಕಿಟಕಿಗಳಲ್ಲಿ, ಮೆಟ್ಟಿಲುಗಳ ಎರಡೂ ಬದಿಯಲ್ಲಿ, ತುಳಸಿ ಕಟ್ಟೆ ಎದುರು ಹೂವಿನಲ್ಲಿ ಸುಂದರ ರಂಗೋಲಿ ಬಿಡಿಸಿ ಅದರ ಮಧ್ಯೆ, ದೇವರ ಮನೆಯಲ್ಲಿ ಜಾಗ ವಿಶಾಲವಾಗಿದ್ದರೆ ಮಧ್ಯೆ ಕೆಂಪು/ಹಳದಿ ಬಣ್ಣದ ಹೂವಿಟ್ಟು ಸುತ್ತ ದೀಪ ಜೋಡಿಸಬಹುದು. ಇಷ್ಟೇ ಅಲ್ಲದೇ ಒಂದು ಅಗಲವಾದ ಪಾತ್ರೆಯಲ್ಲಿ ನೀರಿಟ್ಟು. ಅದರಲ್ಲಿ ಮೇಣದ ದೀಪಗಳನ್ನು ತೇಲಿ ಬಿಡಬಹುದು. ಒಂದು ತಟ್ಟೆಗೆ ಕುಂದನ್ ಅಲಂಕರಿಸಿ ಮಧ್ಯೆ ದೀಪ ಹಚ್ಚಿಟ್ಟರೆ, ಕುಂದನ್ ಬಣ್ಣಕ್ಕೂ ದೀಪಕ್ಕೂ ತುಂಬಾ ಚೆಂದವಾಗಿ ಕಾಣುತ್ತದೆ. ಇದನ್ನೂ ಓದಿ: ಉತ್ತರ ಭಾರತದಲ್ಲಿ 5 ದಿನ ದೀಪಾವಳಿ – ಯಾವ ದಿನ ಯಾವ ಹಬ್ಬ?

DEEPAVALI 4

ದೀಪ ಬೆಳಗುವಾಗ ಇರಲಿ ಎಚ್ಚರ:
ದೀಪಗಳ ಹಬ್ಬ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಆದರೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ದೀಪ ಹಚ್ಚುವಾಗ ಎಚ್ಚರಿಕೆಯಿಂದಿರಬೇಕು.
– ದೀಪಗಳಿಗೆ ಅಗತ್ಯವಿರುವಷ್ಟೇ ಎಣ್ಣೆ ಹಾಕಿ. ಇಲ್ಲವಾದಲ್ಲಿ ಎಣ್ಣೆ ಸೋರಿ ದೀಪವಿಟ್ಟ ಜಾಗದಲ್ಲಿ ಜಿಡ್ಡು ನಿಂತುಕೊಳ್ಳುತ್ತದೆ
– ದೀಪಗಳನ್ನು ಹಚ್ಚಿದ ಬಳಿಕ ದೀಪದ ಪಕ್ಕದಲ್ಲಿ ಹೆಚ್ಚಾಗಿ ಓಡಾಡಬೇಡಿ. ಧರಿಸಿದ ಬಟ್ಟೆಗೆ ಬೆಂಕಿ ತಗುಲಬಹುದು
– ಮೆಟ್ಟಿಲ ಎರಡೂ ಬದಿ ದೀಪ ಇಟ್ಟಾಗ ಓಡಾಡುವಾಗ ಎಚ್ಚರ. ಯಾಕೆಂದರೆ ಎಣ್ಣೆ ಚೆಲ್ಲಿದ್ದರೆ ನೆಲ ಜಾರುತ್ತದೆ
– ದೀಪದ ಕೆಳಗೆ ಸಣ್ಣ ತಟ್ಟೆಗಳನ್ನು ಇಟ್ಟರೆ ತುಂಬಾ ಉತ್ತಮ. ಎಣ್ಣೆ ಸೋರಿದರೆ ತಟ್ಟೆಯಲ್ಲೇ ನಿಲ್ಲುತ್ತದೆ
– ಎಲೆಕ್ಟ್ರಿಕ್ ದೀಪಗಳನ್ನು ಮೆಟ್ಟಿಲುಗಳಿಗೆ, ಮನೆಯ ಬಾಗಿಲಿಗೆ ಹಾಕುವಾಗ ಎಚ್ಚರವಹಿಸಿ
– ಎಲೆಕ್ಟ್ರಿಕ್ ದೀಪಗಳ ಖರೀದಿ ವೇಳೆ ಅದರ ಗುಣಮಟ್ಟ ನೋಡಿ ತೆಗೆದುಕೊಳ್ಳಿ
– ದೀಪ ಹಚ್ಚಿದ ಬಳಿಕ ಮಕ್ಕಳ ಬಗ್ಗೆ ಎಚ್ಚರ ವಹಿಸಿ

DEEPAVALI 8

Share This Article
Leave a Comment

Leave a Reply

Your email address will not be published. Required fields are marked *