ಹಾಸನ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸಖ್ಯ ಬೆಳೆಸಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಬಾಂಬ್ ಸಿಡಿಸಿದ್ದಾರೆ.
ಹಾಸನಾಂಬೆಯ ದರ್ಶನದ ನಂತರ ಈ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದಳದಿಂದ 12 ರಿಂದ 15 ಜನ ಶಾಸಕರು ಬಿಜೆಪಿಗೆ ಬರಲಿದ್ದಾರೆ. ಹೀಗಾಗಿ ಕುಮಾರಸ್ವಾಮಿಯವರೇ ಬಿಜೆಪಿ ಜೊತೆ ಸಖ್ಯ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿಯವರು ಈ ಹಿಂದೆ ಹೇಳಿದಂತೆ ರಾಜಕೀಯ ನಿವೃತ್ತಿ ತೆಗೆದುಕೊಂಡರೆ ಒಳ್ಳೆಯದು. ನಿವೃತ್ತಿಯಾಗಲು ಇದು ಸೂಕ್ತ ಕಾಲ. ಒಂದು ತಿಂಗಳ ಹಿಂದೆ ಸರ್ದಾರ್ ವಲ್ಲಭಭಾಯ್ ಪಟೇಲ್ ಜೊತೆ ನಿಂತು ಮಾಜಿ ಪ್ರಧಾನಿ ದೇವೇಗೌಡರು ಫೋಟೋಗೆ ಪೋಸ್ ನೋಡಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರಧಾನಿ ಮೋದಿ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಬಿಜೆಪಿ ನಾಯಕರು ಎಚ್ಚರಿಕೆಯಿಂದ ಇರಬೇಕು ಎಂದರು.
ಯಾವುದೇ ಕಾರಣಕ್ಕೂ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳಬೇಡಿ ಎಂದು ನಾನು ಕಾಂಗ್ರೆಸ್ಸಿನಲ್ಲಿದ್ದಾಗ ಸಿದ್ದರಾಮಯ್ಯನವರಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ. ಜೆಡಿಎಸ್ ಕುರಿತು ಅವರಿಗೆ ಈಗ ಅರಿವಾಗಿದೆ. ನಾನು ಹೇಳಿದಂತೆಯೇ ಮೈತ್ರಿ ಹೆಚ್ಚು ದಿನ ಉಳಿಯಲಿಲ್ಲ ಎಂದರು.
ನಮ್ಮ ಬಿಜೆಪಿಯವರು ಹುಷಾರಾಗಿರಬೇಕು. ಅಧಿಕಾರಕ್ಕಾಗಿ ಜೆಡಿಎಸ್‍ನವರು ಯಾರ ಜೊತೆ ಬೇಕಾದರೂ ಸಖ್ಯ ಬೆಳೆಸುತ್ತಾರೆ. ಯಾವುದಕ್ಕೂ ಎಚ್ಚರದಿಂದಿರುವುದು ಒಳ್ಳೆಯದು ಎಂದು ತಿಳಿಸಿದರು.