ಬೆಂಗಳೂರು: ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ಇಲಾಖೆ ನಗರದಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ನಗರದಲ್ಲಿ 65ರಿಂದ 115 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಫುಲ್ ಅಲರ್ಟ್ ಆಗಿದ್ದಾರೆ. ಗೌತಮ್ ಕುಮಾರ್ ಅವರು ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳಿಗೆ ತುರ್ತು ಸಭೆ ಕರೆದಿದ್ದರು. ಈ ಸಭೆಯಲ್ಲಿ ಮಳೆಯಿಂದ ಆಗುವ ಹಾನಿಗಳು ಹಾಗೂ ಅನಾಹುತಗಳನ್ನು ತಡೆಗಟ್ಟುವ ಕುರಿತು ಚರ್ಚೆ ಮಾಡಿದ್ದಾರೆ.
ರಾಜಧಾನಿ ಬೆಂಗಳೂರಲ್ಲಿ ಸೋಮವಾರ ಮಧ್ಯಾಹ್ನದಿಂದ ಶುರುವಾಗಿದ್ದ ಮಳೆ ಇಂದು ಬೆಳಗ್ಗಿನವರೆಗೂ ಮುಂದುವರಿಯಿತು. ತಗ್ಗುಪ್ರದೇಶಗಳಲ್ಲಿರುವ ಮನೆಗಳು, ರಸ್ತೆಗಳು ಜಲಾವೃತಗೊಂಡಿವೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಸದಾಶಿವನಗರ, ಮೇಖ್ರಿ ಸರ್ಕಲ್, ಜಯನಗರ, ಬಿಟಿಎಂ, ಮೈಕೋ ಲೇಔಟ್ ಹೆಚ್.ಎಸ್.ಆರ್ ಲೇಔಟ್, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಜೆಸಿ ರೋಡ್ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಮಳೆ ಸುರಿದಿದೆ. ಬಿಟಿಎಂ ಎರಡನೇ ಹಂತದಲ್ಲಿ ಮರ ಬಿದ್ದಿದೆ.