ನಾನು ಬಾಯಿ ಬಿಟ್ರೆ ಸಿದ್ದರಾಮಯ್ಯ, ಗುಂಡೂರಾವ್‍ಗೆ ನಿದ್ರೆ ಬರಲ್ಲ: ಅನಂತ್‍ಕುಮಾರ್ ಹೆಗ್ಡೆ

Public TV
2 Min Read
Anantkumar hegde Siddu Gundu rao

ಕಾರವಾರ: ನಾನು ಬಾಯಿ ಬಿಟ್ಟರೆ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ನಿದ್ದೆನೇ ಬರಲ್ಲ ಎಂದು ಸಂಸದ ಅನಂತ್‍ಕುಮಾರ್ ವ್ಯಂಗ್ಯವಾಡಿದ್ದಾರೆ.

ದಾಂಡೇಲಿಯಲ್ಲಿ ಮಾತನಾಡಿದ ಸಂಸದರು, ಪ್ರತಿ ರೇಷನ್ ಅಂಗಡಿಯಲ್ಲೂ ಮದ್ಯ ಕೊಡಿ ಅಂದಿದ್ದು ಯಾರು? ಭಾಗ್ಯದ ಹೆಸರಲ್ಲಿ ಸಾರಾಯಿ ಭಾಗ್ಯ ಯೋಜನೆ ರಾಜ್ಯಕ್ಕೆ ತಂದು ಕೊಟ್ಟಿದ್ದು ಯಾರು ಎಂದು ಸಂಸದರು ಪ್ರಶ್ನಿಸಿದರು. ಆಗ ಕೆಲ ಕಾರ್ಯಕರ್ತರು ಸಿದ್ದರಾಮಯ್ಯ ಎಂದು ಉತ್ತರಿಸಿದರು. ಈ ವೇಳೆ ಸಂಸದರು, ಕೆಲವು ಸಂದರ್ಭಗಳಲ್ಲಿ ಅಂತವರನ್ನು ನೆನೆಯಬಾರದು. ಸಿದ್ದರಾಮಯ್ಯ ಅವರ ಹೆಸರು ಹೇಳಿದ್ದು ನೀವು, ನಾನಲ್ಲ. ಇವತ್ತು ನಾನು ಇಷ್ಟು ಮಾತನಾಡಿದ್ದನ್ನು ಕೇಳಿದ್ರೆ ಸಾಕು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್‍ನವರು ಜಿಗಿದು, ಜಿಗಿದು ಕೂರುತ್ತಾರೆ. ನಾನು ಬಾಯಿ ಬಿಟ್ಟಿದ್ದು ಗೊತ್ತಾದ್ರೆ ಅವರಿಗೆ ನಿದ್ರೆ ಬರಲ್ಲ ಎಂದು ಕುಟುಕಿದರು.

Anantkumar hegde A

ಸ್ವಚ್ಛತೆಗೆ ಮಹಾತ್ಮ ಗಾಂಧೀಜಿ ಪ್ರಾಮುಖ್ಯತೆ ನೀಡುತ್ತಿದ್ದರು. ಸ್ವತಃ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಗಾಂಧೀಜಿ ಅವರ ಹೆಸರಿನಲ್ಲಿ ಸಮಾಜದ ಒಳಗೆ ಹಾಗೂ ಹೊರಗೆ ಕೆಸರನ್ನು ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ಸಿಗರು ಯಾವತ್ತೂ ದೇಶವನ್ನು ಸ್ವಚ್ಛ ಮಾಡುವ ಬಗ್ಗೆ ಯೋಚಿಸಲಿಲ್ಲ. ಈಗ ನೋಡಿ ಕೆಸರು ಹಾಕಲಿಕ್ಕೆ ಜಾಗವಿಲ್ಲದ್ದಕ್ಕೆ ಒಬ್ಬೊಬ್ಬರೇ ತಿಹಾರ್ ಜೈಲಿಗೆ ಹೋಗುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದರು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು. ರಾಮರಾಜ್ಯದ ಕಲ್ಪನೆ ಕೊಟ್ಟಿದ್ದು ಮಹಾತ್ಮಾ ಗಾಂಧೀಜಿ ಅವರೇ ಹೊರತು ಆರ್‍ಎಸ್‍ಎಸ್, ಬಿಜೆಪಿ, ವಿಶ್ವ ಹಿಂದೂ ಪರಿಷತ್ ಅಲ್ಲ. ಆದರೆ ರಾಮರಾಜ್ಯ ಕಾಂಗ್ರೆಸ್‍ನ ಅಜೆಂಡಾದಲ್ಲಿ ಇರಲಿಲ್ಲ. ರಾಮರಾಜ್ಯದ ಕಲ್ಪನೆ ಇಟ್ಟು ಕೊಂಡವರು ಬಿಜೆಪಿಯವರು. ಪ್ರತಿನಿತ್ಯ ಮಹಾತ್ಮ ಗಾಂಧೀಜಿ ಅವರನ್ನ ಹತ್ಯೆ ಮಾಡಿದ್ದು, ಅವಹೇಳನ ಮಾಡಿದ್ದು ಕಾಂಗ್ರೆಸ್. ಗಾಂಧೀಜಿ, ಬಿ.ಆರ್.ಅಂಬೇಡ್ಕರ್, ವೀರ್ ಸಾವರ್ಕರ್ ಹೀಗೆ ದೇಶಕ್ಕಾಗಿ ದುಡಿದರನ್ನು ಬದಿಗಿಡುವ ಕೆಲಸವನನ್ನು ಕಾಂಗ್ರೆಸ್ ಮಾಡಿದೆ ಎಂದು ಕಿಡಿಕಾರಿದರು.

PM MODI 1

ಮಹಾತ್ಮ ಗಾಂಧೀಜಿ ಅವರು ‘ನಾನೇಕೆ ಹಿಂದೂ’ ಎನ್ನುವ ಪುಸ್ತಕ ಬರೆದಿದ್ದಾರೆ. ಕಾಂಗ್ರೆಸ್ಸಿಗರು ಅದನ್ನು ಓದಿದ್ರೆ ಎಲ್ಲರೂ ಕಾಳಿ ನದಿಯಲ್ಲಿ ಸ್ನಾನ ಮಾಡಿ ಹೋಗುತ್ತಾರೆ. ಪುಸ್ತಕ ಓದಿದರೂ ಸಿದ್ದರಾಮಯ್ಯನವರ ತಲೆ ಸರಿ ಹೋಗುತ್ತೆ ಎನ್ನುವ ವಿಶ್ವಾಸ ಖಂಡಿತ ನನಗಿಲ್ಲ ಎಂದು ಗುಡುಗಿದರು.

Share This Article
Leave a Comment

Leave a Reply

Your email address will not be published. Required fields are marked *